Advertisement

ಸಿದ್ದು ಅತಿಥಿ ಎಂಎಲ್‌ಎ: ಮತದಾರನ ಟ್ವೀಟ್‌ ವೈರಲ್‌

09:02 AM Jun 18, 2019 | Lakshmi GovindaRaj |

ಬೆಂಗಳೂರು: ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಮತದಾರರೊಬ್ಬರು, “ಕ್ಷೇತ್ರಕ್ಕೆ ಅತಿಥಿ ಶಾಸಕರಾಗಬೇಡಿ, ಬಂದು ಕ್ಷೇತ್ರದಲ್ಲಿ ಮನೆ ಮಾಡಿ, ಜನರ ಕಷ್ಟ ಆಲಿಸಿ,’ ಎಂದು ಮಾಡಿರುವ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

Advertisement

ಸ್ವತಃ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ತಾವು ಶಾಸಕರಾಗಿ ಆಯ್ಕೆಯಾದ ಮೇಲೆ ಬಾದಾಮಿ ಕ್ಷೇತ್ರಕ್ಕೆ ಐವತ್ತು ಬಾರಿ ಭೇಟಿ ನೀಡಿದ್ದು, ಸುಮಾರು 1,300 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಅಲ್ಲದೇ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳಲು ಬಾದಾಮಿ ಪಟ್ಟಣದಲ್ಲಿ ಗೃಹ ಕಚೇರಿಯನ್ನೂ ತೆರೆದಿರುವುದಾಗಿ ಟ್ವೀಟ್‌ ಮೂಲಕ ತಿಳಿಸಿರುವ ಅವರು, ಬಾದಾಮಿ ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ಮೂಲಸೌಕರ್ಯ ಸೇರಿದಂತೆ ವಿವಿಧ ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನದ ಪಟ್ಟಿಯನ್ನೂ ಪ್ರಕಟಿಸಿದ್ದಾರೆ.

ಅಲ್ಲದೇ ವಿಶ್ವ ಪ್ರಸಿದ್ಧ ಬನಶಂಕರಿ ದೇವಸ್ಥಾನದ ಮುಂದಿನ ಹೊಂಡಕ್ಕೆ ನೀರು ತುಂಬಿಸಲು ಮಲಪ್ರಭಾ ನದಿಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಂಡದಲ್ಲಿ ಹೂಳು ತುಂಬಿರುವುದರಿಂದ ಅದನ್ನು ತೆಗೆಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಾಧನೆಯ ತುತ್ತೂರಿ ಊದುವುದು ನನ್ನ ಜಾಯಮಾನ ಅಲ್ಲ. ಶಾಸಕನಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಇದು ಕ್ಷೇತ್ರದ ಮತದಾರರಿಗೆ ತಿಳಿದಿದೆ. ಈ ಬಗ್ಗೆ ರಾಜಕೀಯ, ವಾಗ್ವಾದ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಆದರೆ, ಅವರ ಸಮರ್ಥನೆಗೆ ನೆಟ್ಟಿಗರಲ್ಲಿ ಪರ, ವಿರೋಧದ ಚರ್ಚೆ ಜೋರಾಗಿದೆ. ಅಭಿಷೇಕ್‌, ಸಿದ್ದು, ನಾಗೇಶ್‌ ಕುಮಾರ್‌, ಬಸವರಾಜ್‌ ಎನ್ನುವವರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದು, ನಿಮ್ಮ ಕಾರ್ಯ ಶ್ಲಾಘನೀಯ, ನೀವು ಎಲ್ಲಿರುತ್ತೀರೋ ಅಲ್ಲಿ ಅಭಿವೃದ್ಧಿ ಇರುತ್ತದೆ ಎಂದು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ.

ಚೌಕಿದಾರ್‌ ತಿಮ್ಮಾರೆಡ್ಡಿ ಎನ್ನುವವರು ಸರ್ಕಾರದ ದುಡ್ಡಿನಿಂದ ಕೆಲಸ ಮಾಡಿ ಇಷ್ಟು ಹೇಳಿಕೊಳ್ಳುತ್ತಿರುವ ನೀವು ಸ್ವಂತ ದುಡ್ಡಿನಿಂದ ಕೆಲಸ ಮಾಡಿದ್ದರೆ, ಬ್ಯಾನರ್‌ ಹಾಕಿಸಿ ಬಿಡುತ್ತಿದ್ದಿರಿ ಎಂದು ಕಾಲೆಳೆದಿದ್ದಾರೆ.

ಪುನೀತ್‌ ಹಡಪದ್‌ ಎನ್ನುವವರು ನೀವು ಒಬ್ಬರು ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಹಾಲಿ ಶಾಸಕರಾಗಿ ಅದೇ ಕ್ಷೇತ್ರದಲ್ಲಿ ನೆಲೆಯೂರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಬೇಕು. ಬೆಂಗಳೂರಿನಲ್ಲಿ ಕುಳಿತು ಅಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. ಇದು ನಿಮ್ಮ ವೃತ್ತಿ ಜೀವನದ ಕೊನೆಯ ಕ್ಷೇತ್ರ ಮತ್ತು ಕೊನೆಯ ಶಾಸಕ ಎಂದು ಸುದೀಪ್‌ ಗುಗ್ಗರಿ ಎನ್ನುವವರು ಹೇಳಿದ್ದಾರೆ.

ಇಂದ್ರ ಎನ್ನುವವರು ಐವತ್ತು ಬಾರಿ ಎಲ್ಲಿ, ಯಾವಾಗ ಭೇಟಿ ನೀಡಿದ್ದೀರಿ ಎನ್ನುವುದರ ದಾಖಲೆ ನೀಡಿ. ಯಾರಾದರೂ ಆರ್‌ಟಿಐ ಮೂಲಕ ಮಾಹಿತಿ ಪಡೆದು ಸತ್ಯ ಹೊರ ಬರುವ ಮೊದಲು ಎಂದು ಸವಾಲು ಹಾಕಿದ್ದಾರೆ. ಪ್ರದೀಪ್‌ ಎನ್ನುವವರು ನೀವು ಬಾದಾಮಿ ಕ್ಷೇತ್ರದ ಶಾಸಕರಾಗಿರುವುದಕ್ಕೆ ನಮ್ಮ ಪುಣ್ಯ. ನಿಮ್ಮ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿ. ನಿಮ್ಮನ್ನು ಮುಖ್ಯಮಂತ್ರಿಯಾಗಿ ನೋಡುವ ಆಸೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next