Advertisement

ಕೆಲಸ ಮಾಡಿದ್ದರೂ ಸಿದ್ದು, ಧ್ರುವ ಸೋತಿದ್ದೇಕೆ?

09:28 PM Aug 07, 2019 | Lakshmi GovindaRaj |

ಮೈಸೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣಗಳೇನು?, ಪಕ್ಷದ ಸಂಘಟನೆ ಸದೃಢಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಬಗ್ಗೆ ಕ್ಷೇತ್ರವಾರು ವರದಿ ತಯಾರಿಸಿ ಅ.2ರಂದು ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿಯ ಮುಖ್ಯಸ್ಥ ವಿ.ಆರ್‌.ಸುದರ್ಶನ್‌ ತಿಳಿಸಿದರು. ಮೈಸೂರಿನ ಕಾಂಗ್ರೆಸ್‌ ಕಚೇರಿಗೆ ಬುಧವಾರ ಭೇಟಿ ನೀಡಿ ಜಿಲ್ಲೆಯ ವಿಧಾನಸಭಾವಾರು ಪ್ರಮುಖ ಕಾರ್ಯಕರ್ತರಿಂದ ಮುಖತಃ ಮಾಹಿತಿ ಕಲೆಹಾಕಿದ ಸಂದರ್ಭದಲ್ಲಿ ಅವರು ಮಾತನಾಡಿದರು.

Advertisement

ಸೋತಿದ್ದೇಕೆ?: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದರೂ 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಆ ಕ್ಷೇತ್ರದಲ್ಲಿ ಸೋತಿದ್ದೇಕೆ?, ಸಂಸದರಾಗಿ ಧ್ರುವನಾರಾಯಣ ಉತ್ತಮವಾಗಿ ಕೆಲಸ ಮಾಡಿದ್ದಲ್ಲದೆ, ಜನಸಂಪರ್ಕವನ್ನು ಇರಿಸಿಕೊಂಡಿದ್ದರೂ ಸೋತಿದ್ದೇಕೆ? ಕಾಂಗ್ರೆಸ್‌ ಪಕ್ಷವನ್ನು ನಂಬಿ ಬಂದ ಸಿ.ಎಚ್‌.ವಿಜಯಶಂಕರ್‌ ಸೋಲಿಗೆ ಕಾರಣಗಳೇನು ಎಂಬುದನ್ನು ಕಂಡುಕೊಂಡು, ಮುಂಬರುವ ದಿನಗಳಲ್ಲಿ ಆ ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಚುನಾವಣೆ ಸೋಲಿಗೆ ನಿಖರ ಕಾರಣಗಳನ್ನು ತಿಳಿದುಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ಸತ್ಯಶೋಧನಾ ಸಮಿತಿ ರಚಿಸಿದ್ದು, ಬೆಂಗಳೂರಿನಲ್ಲಿ ಕುಳಿತರೆ ಸ್ಥಳೀಯ ವಸ್ತುಸ್ಥಿತಿ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಪ್ರವಾಸ ಕೈಗೊಳ್ಳಲಾಗಿದೆ. ಸಮಿತಿ ಈಗಾಗಲೇ ಕಲಬುರ್ಗಿ, ಬೆಳಗಾವಿ ಕಂದಾಯ ವಿಭಾಗಗಳಲ್ಲಿ ಪ್ರವಾಸ ಕೈಗೊಂಡು ಮಾಹಿತಿ ಕಲೆ ಹಾಕಿದೆ. ಮೈಸೂರು ವಿಭಾಗದಲ್ಲಿ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಪ್ರವಾಸ ಆಗಬೇಕಿದೆ.

ಬೆಂಗಳೂರು ಕಂದಾಯ ವಿಭಾಗದ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡು ವಸ್ತುನಿಷ್ಠ ವರದಿಯನ್ನು ಗಾಂಧಿ ಜಯಂತಿಯಂದು ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಸಲ್ಲಿಸುವುದಾಗಿ ಹೇಳಿದರು. ದೇಶದಲ್ಲಿ ಬಿಜೆಪಿಗೆ ಪರ್ಯಾಯವಾಗಿ ನಿಲ್ಲಬಲ್ಲ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಇದೆ. ವಿರೋಧಪಕ್ಷವಾಗಿ ನಾವು ಪಕ್ಷದ ಸಂಘಟನಾ ಸಾಮರ್ಥ್ಯವನ್ನು ಹೆಚ್ಚಿಸಲು ಜನರ ಬಳಿಗೆ ಹೋಗಬೇಕಿದೆ ಎಂದರು.

ಕಾಂಗ್ರೆಸ್‌ಗೆ ಹೆಚ್ಚು ಶೇಕಡವಾರು ಮತ: ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಕಾಂಗ್ರೆಸ್‌ ಹೀನಾಯವಾಗಿ ಸೋತಿದೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ಶೇಕಡಾವಾರು ಮತಗಳಿಕೆಯಲ್ಲಿ ನಾವು ಬಿಜೆಪಿಗಿಂತ ಮುಂದಿದ್ದೇವೆ. ಆದರೆ, ಸ್ಥಾನಗಳಿಕೆಯಲ್ಲಿ ಹಿನ್ನಡೆಯಾಗಿದೆ. 2013ರ ವಿಧಾನಸಭಾ ಚುನಾವಣೆಗಿಂತ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.2ರಷ್ಟು ಹೆಚ್ಚು ಮತಗಳಿಸಿದೆ. ಹತ್ತು ಲಕ್ಷ ಮತದಾರರು ಕಾಂಗ್ರೆಸ್‌ಗೆ ಹೊಸದಾಗಿ ಮತ ಹಾಕಿದ್ದಾರೆ. ಆದರೆ, ಸ್ಥಾನಗಳಿಕೆ 80ಕ್ಕೆ ಸೀಮಿತವಾಯಿತು.

Advertisement

ಸ್ಥಳೀಯ ವಿಚಾರಗಳಿಂದಾಗಿ ನಮಗೆ ಸೋಲಾಯಿತು. ಉತ್ತರ ಕರ್ನಾಟಕ ಭಾಗದ ಲಿಂಗಾಯತರೆಲ್ಲ ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವುದು ಸರಿಯಲ್ಲ. ಅಲ್ಲಿನ 96 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 40 ಸ್ಥಾನ ಗೆದ್ದಿದೆ. ಬೆಂಗಳೂರು ನಗರ ಮತ್ತು ಕರಾವಳಿ ಭಾಗದಲ್ಲಿ ಸ್ಥಾನ ಕಡಿಮೆಯಾಗಿದ್ದರಿಂದ ಸೋಲಾಯಿತು. ಯಾವ್ಯಾವ ವಿಚಾರಗಳಿಗೆ ಸೋಲಾಯಿತು ಎಂಬುದನ್ನು ವಿಚಾರ ಮಾಡಬೇಕಿದೆ. ಕಾಂಗ್ರೆಸ್‌ ಪಕ್ಷವನ್ನು ಸದೃಢಗೊಳಿಸಿದರೆ ದೇಶ ಮತ್ತು ರಾಜ್ಯದ ಅಭಿವೃದ್ಧಿ ಸಾಧ್ಯ ಎಂದರು.

ಭಾರೀ ಹಿನ್ನಡೆ: ಸಮಿತಿ ಸದಸ್ಯರಾದ ಮಾಜಿ ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಪ್ರವಾಸ ಮಾಡಿ ಅಲ್ಲಿನ ಸ್ಥಳೀಯ ಮುಖಂಡರ ಅಹವಾಲು ಆಲಿಸಿದ್ದೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಸ್ಥಾನವನ್ನಷ್ಟೇ ಈ ಚುನಾವಣೆಯಲ್ಲಿ ಗೆದ್ದಿದ್ದೇವೆ.

ಕಾಂಗ್ರೆಸ್‌ ಪಕ್ಷಕ್ಕೆ ಹಿಂದೆಂದೂ ಇಷ್ಟೊಂದು ಹಿನ್ನಡೆ ಆಗಿರಲಿಲ್ಲ. ಅದಕ್ಕಾಗಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಪ್ರವಾಸ ಕೈಗೊಂಡ ಕ್ಷೇತ್ರಗಳಲ್ಲೆಲ್ಲ ಈ ಬಾರಿ ಧರ್ಮ ಮತ್ತು ಜಾತಿ ಆಧಾರದ ಮೇಲೆ ಚುನಾವಣೆ ನಡೆಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಾವು ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದೆವು, ಅಭಿವೃದ್ಧಿಗೆ ಜನ ಮನ್ನಣೆ ಸಿಗಲಿಲ್ಲ ಎಂದರು.

ವಲಸಿಗರಿಗೆ ಸ್ವಾಗತ ಬೇಡ: ಶಾಸಕ ತನ್ವೀರ್‌ ಸೇಠ್ ಮಾತನಾಡಿ, ನಾವು ಜನರನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದೇವೆ. ಪಕ್ಷದ ಒಳಗಿನವರಿಂದಲೂ ನಮಗೆ ಪೆಟ್ಟು ಬಿದ್ದಿದೆ. 364 ದಿನ ಹೊರಗಿದ್ದು ಒಂದು ದಿನದ ಮಟ್ಟಿಗೆ ಪಕ್ಷಕ್ಕೆ ಬರುವವನಿಗೆ ಹಾರ ಹಾಕಿ ಸ್ವಾಗತಿಸುವ ಪದ್ಧತಿ ಸರಿಯಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಅಷ್ಟೊಂದು ಬರ ಬಂದಿಲ್ಲ. ಪಕ್ಷ ಕಟ್ಟಿದವರನ್ನು ಸನ್ಮಾನಿಸೋಣ, ತಪ್ಪು ಮಾಡಿದವನ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಹಾರ ಹಾಕುತ್ತಾ ಹೋದರೆ ಪಕ್ಷದ ಸಂಘಟನೆ ಹೇಗೆ ಮಾಡುವುದು ಎಂದು ಪ್ರಶ್ನಿಸಿದರು.

ವೀರಕುಮಾರ್‌ ಪಾಟೀಲ, ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next