Advertisement

ಶೀಘ್ರವೇ ಸಿದ್ದು-ಎಂ.ಬಿ.ಪಾಟೀಲ ಬಿಜೆಪಿ ಸೇರ್ಪಡೆ: ಕಟೀಲ್‌

05:56 PM Oct 09, 2021 | Shwetha M |

ವಿಜಯಪುರ: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಧಾನಸಭೆಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ. ಈ ಚುನಾವಣೆ ಬಳಿಕ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

Advertisement

ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಪಕ್ಷಕ್ಕೆ ಸೇರುತ್ತಿರುವ ನಾಯಕರು ಸ್ಪರ್ಧೆ, ಟಿಕೆಟ್‌ ಆಸೆಯಿಂದ ಬಿಜೆಪಿಗೆ ಬರುತ್ತಿಲ್ಲ. ಬದಲಾಗಿ ಪ್ರಧಾನಿ ಮೋದಿ ಉದಾತ್ತ ಆಡಳಿತ ಕಾರ್ಯವೈಖರಿ ಮೆಚ್ಚಿ ಜನರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಎಂ.ಬಿ. ಪಾಟೀಲ ಮನೆ ಈಗ ಖಾಲಿಯಾಗುತ್ತಿದ್ದು, ಅವರ ಬಿಜೆಪಿ ಸೇರ್ಪಡೆ ಕಾಲವೂ ಬರಲಿದೆ. ಅಷ್ಟೇ ಅಲ್ಲ ಈ ವಿಷಯ ಕೇಳಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಖುಷಿಯಾಗಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ತಮ್ಮ ಆಡಳಿತ ಅವಧಿಯಲ್ಲಿನ ಹಿಂದೂತ್ವ ನೆನಪಾಗಲಿಲ್ಲ. ಆದರೆ ಈಗ ಏಕಾಏಕಿ ಹಿಂದೂಗಳ ಪರ ಮಾತನಾಡುತ್ತಿದ್ದಾರೆ. ಹಿಂದೂ ದೇವಾಲಯಗಳ ರಕ್ಷಣೆಗೆ ಗಟ್ಟಿ ತೀರ್ಮಾನ ತೆಗೆದುಕೊಂಡ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಉಪ ಚುನಾವಣೆ ಮಾತ್ರವಲ್ಲ ಭವಿಷ್ಯದಲ್ಲಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ವಿಜಯಪುರ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಾಧಿಸಲಿದೆ. ಸಿಂದಗಿ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಕೊಡಿ, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಎಳ್ಳಷ್ಟೂ ವಂಚನೆ ಮಾಡುವುದಿಲ್ಲ. ಜತೆಗೆ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನದ ಬಗ್ಗೆಯೂ ವರಿಷ್ಠರು ಗಮನ ಹರಿಸಲಿದ್ದಾರೆ ಎಂದರು.

ಇದೇ ವೇಳೇ ವಿವಿಧ ಪಕ್ಷಗಳಿಂದ ಹಲವು ನಾಯಕರು ಬಿಜೆಪಿ ಸೇರ್ಪಡೆಯಾದರು. ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪರಾಜಿತ ಅಭ್ಯರ್ಥಿ ಅಪ್ಪುಗೌಡ ಪಾಟೀಲ ಮನಗೂಳಿ, ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌ನ ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಇಂಡಿ ಕ್ಷೇತ್ರದ ಕಾಂಗ್ರೆಸ್‌ನ ಜಿಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಜಿಪಂ ಮಾಜಿ ಸದಸ್ಯ ಶಿವಶರಣ ಭೈರಗೊಂಡ, ಸುರೇಶಗೌಡ ಬಿರಾದಾರ ಮೊದಲಾದವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ ರಮೇಶ ಜಿಗಜಿಣಗಿ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಶಾಸಕ ಅರುಣ ಶಹಾಪುರ, ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್‌.ಪಾಟೀಲ ಕೂಚಬಾಳ, ಮಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹೇಶ ಟೆಂಗಿನಕಾಯಿ ಇದ್ದರು.

ಪಕ್ಷ ನನ್ನನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ನನ್ನನ್ನು ಬಿಡಿ ಜಿಲ್ಲೆಯ ಒಬ್ಬರನ್ನು ಸಚಿವರನ್ನಾಗಿ ಮಾಡಿ. ಅನೇಕರು ಪಕ್ಷದ ವರಿಷ್ಠರಿಗೆ ಯತ್ನಾಳ ಸರಿ ಇಲ್ಲ, ನಾಲಿಗೆ ಸರಿ ಇಲ್ಲ ಎಂದು ಕಿವಿ ತುಂಬುತ್ತಿರುತ್ತಾರೆ. ಹಣೆಬರಹ ಚೆನ್ನಾಗಿದ್ದರೆ ಯಾರೂ ನಮ್ಮ ಭವಿಷ್ಯವನ್ನು ತಡೆಯಲು ಸಾಧ್ಯವಿಲ್ಲ. ನನ್ನನ್ನು ಮುಗಿಸಲು ಹಲವರು ಯತ್ನಿಸುತ್ತಿದ್ದಾರೆ. ಏನೇ ಆದರೂ ವಿಜಯಪುರ ಕ್ಷೇತ್ರದಲ್ಲಿ ಮತ್ತೆ ನಾನೇ ಎಂಎಲ್.

Advertisement

ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

ಪಕ್ಷದಲ್ಲಿರುವ ಯಾರೂ ಒಳ ಒಪ್ಪಂದ ರಾಜಕಾರಣ ಮಾಡಬಾರದು. ನಿಮ್ಮ ತಂದೆತಾಯಿ ಮೇಲೆ ಪ್ರಮಾಣ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುತ್ತಾರೆ. ವಿಜಯಪುರ ಜಿಲ್ಗೆಯಲ್ಲಿ ಪಕ್ಷಕ್ಕೂ ಬಾಧೆ ಇರಲ್ಲ.

ಲಕ್ಷ್ಮಣ ಸವದಿ, ಮಾಜಿ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next