ಧಾರವಾಡ: ಅವರು ಕುಸ್ತಿ ಹಿಡಿದರೆ ಪ್ರೇಕ್ಷಕರ ಮೈಯಲ್ಲಿ ರೋಮಾಂಚನ.. ಅವರು ಹಾಕುವ ಪಟ್ಟುಗಳಿಗೆ ಎದುರಾಳಿಗೆ ಪೆಟ್ಟು ಖಾತರಿ.. ಮಿಂಚಿನ ವೇಗ..ಗೆಲ್ಲುವ ಉದ್ವೇಗ.. ಒಟ್ಟಿನಲ್ಲಿ ಕುಸ್ತಿ ಅಖಾಡದಲ್ಲಿ ಮಾತ್ರ ಮಹಿಳೆಯರದ್ದೇ ಹವಾ…
ಹೌದು. ಉತ್ತರ ಕನ್ನಡ ಜಿಲ್ಲೆಯಲ್ಲಿನ ಬುಡಕಟ್ಟು ಜನಾಂಗವಾಗಿರುವ ಸಿದ್ಧಿ ಜನಾಂಗದ ಪೈಲ್ವಾನರು ನಾಲ್ಕು ದಿನಗಳ ಧಾರವಾಡ ಕುಸ್ತಿಹಬ್ಬ-2020ರಲ್ಲಿ ಉತ್ತಮ ಸಾಧನೆ ಮಾಡಿ ಮತ್ತೂಮ್ಮೆ ಸೈ ಎನಿಸಿಕೊಂಡಿದ್ದಾರೆ.
ಕರ್ನಾಟಕ ಮಹಿಳಾ ಕೇಸರಿ, ಕರ್ನಾಟಕ ಕಿಶೋರಿ ಸೇರಿದಂತೆ ಇತರ ಕೆ.ಜಿ.ವಿಭಾಗಗಳಲ್ಲಿ ಈ ವರ್ಷ 10ಕ್ಕೂ ಹೆಚ್ಚು ಸಿದ್ದಿ ಮಹಿಳೆಯರು ಸಾಧನೆ ಮಾಡಿ ಕುಸ್ತಿ ಅಖಾಡವನ್ನು ರಂಗೇರಿಸಿದ್ದಾರೆ. ಇಷ್ಟಕ್ಕೂ ಇವರ ಗೆಲುವಿಗೆ ಕಾರಣವಾದರೂ ಏನು? ಬುಡಕಟ್ಟು ಜನಾಂಗವೊಂದರ ಮಹಿಳೆಯರು ಇಷ್ಟೊಂದು ಗಟ್ಟಿ ಕುಸ್ತಿ ಪಟುಗಳಾಗಿ ಹೊರ ಹೊಮ್ಮಲು ಕಾರಣವಾದರೂ ಏನು? ಎಂಬೆಲ್ಲ ಪ್ರಶ್ನೆಗಳನ್ನು ಬೆನ್ನಟ್ಟಿದಾಗ ಅವರೇ ಹೇಳಿದ ಸತ್ಯವೇನೆಂದರೆ, ದೇಶಿ ಆಹಾರ ಪದ್ಧತಿ, ದೇಶಿ ಕುಸ್ತಿ ವಿಧಾನ ಮತ್ತು ಬುಡಕಟ್ಟು ಗುರು ಪರಂಪರೆ.
ಕರ್ನಾಟಕ ಕೇಸರಿಯಾಗಿ ಹೊರ ಹೊಮ್ಮಿದ ಲೀನಾ ಸಿದ್ದಿ ಮತ್ತು ಕರ್ನಾಟಕ ಕಿಶೋರಿ ಶಾಲಿನಿ ಸಿದ್ದಿ ಅವರು ತಮ್ಮ ಗೆಲುವಿನ ಕುರಿತು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಖುಷಿಯಾಗಿ ಹಂಚಿಕೊಂಡಿದ್ದು, ತಮ್ಮ ಸರಣಿ ಗೆಲುವಿನ ಹಿಂದಿರುವ ರಹಸ್ಯವೇ ದೇಶಿ ಆಹಾರ ಪದ್ಧತಿ, ದೇಶಿ ವಿಧಾನದಲ್ಲಿ ಗರಡಿ ಸಾಧನೆ ಮಾಡುತ್ತಿರುವುದಂತೆ. ಫ್ಯಾಟ್ ಹೆಚ್ಚಿಸಿಕೊಳ್ಳಲು, ಸಿಕ್ಸ್‌ಪ್ಯಾಕ್ ಮತ್ತು ದೇಹವನ್ನು ಮನಬಂದಂತೆ ತೀಡಿಕೊಳ್ಳುವ ಬರದಲ್ಲಿ ಇಂದಿನ ಯುವ ಪೈಲ್ವಾನರು ಸಾವಿರಗಟ್ಟಲೇ ಹಣ ಕೊಟ್ಟು ಶಕ್ತಿ ಪಾನೀಯಗಳನ್ನು ಕುಡಿಯುತ್ತಿದ್ದಾರೆ. ಆದರೆ ಸಿದ್ದಿ ಪೈಲ್ವಾನರು ಮಾತ್ರ ತಮ್ಮೂರಿನ ಅದರಲ್ಲೂ ಬುಡಕಟ್ಟು ಜನಾಂಗದವರು ಸಹಜವಾಗಿ ಮಾಡುವ ರೊಟ್ಟಿ, ಮುದ್ದೆ, ಕೋಳಿಮೊಟ್ಟೆ, ಮೀನುಸಾರು ಮತ್ತು ದಿದಳ ಧಾನ್ಯಗಳಿಂದ ಮಾಡಿದ ಆಹಾರಪದಾರ್ಥಗಳನ್ನೇ ಹೆಚ್ಚಾಗಿ ಊಟ ಮಾಡಿ ಕಸರತ್ತು ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಕುಸ್ತಿ ಅಖಾಡದ ತಾಲೀಮ್ ಕೂಡ ಅಷ್ಟೇ, ಓಟ, ಗುಡ್ಡಗಾಡು ಓಟ, ಗರಡಿ ಸಾಧನೆಗಳು ಇವರ ಪ್ರಮುಖ ಆಯ್ಕೆಗಳು. ಆದರೆ ಹೊಸ ವಿಚಾರಗಳನ್ನು ಮಾತ್ರ ಹಳಿಯಾಳದಲ್ಲಿನ ಕುಸ್ತಿ ಅಖಾಡಾದಲ್ಲಿ ಕುಸ್ತಿ ಕೋಚ್‌ಗಳಾದ ಎಂ.ಎನ್. ಕಟ್ಟಿಮನಿ ಮತ್ತು ತುಕಾರಾಮ್ ಅವರಿಂದ ಕಲಿತಿದ್ದು ಬಿಟ್ಟರೆ ಎಲ್ಲವೂ ತಮ್ಮೂರಿನ ಹಳ್ಳಿ ಪೈಲ್ವಾನಕಿ ಗತ್ತು ಮತ್ತು ಡಾವ್ (ಕುಸ್ತಿತಂತ್ರಗಳು)ಗಳನ್ನು ಕಲಿತಿದ್ದೇ ಕುಸ್ತಿಯಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಕಾರಣ ಎನ್ನುತ್ತಾರೆ ಲೀನಾ ಸಿದ್ದಿ.
ಮಹಿಳೆಯಾಗಿದ್ದಕ್ಕೆ ಹೆಮ್ಮೆ: ಮಹಿಳಾ ಕುಸ್ತಿಪಟುವಾಗಿದ್ದಕ್ಕೆ ಹೆಮ್ಮೆ ಪಡುವ ಲೀನಾ, ನಾವು ಹುಟ್ಟಿದಾಗ ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಗಳಲ್ಲಿ ಪೈಲ್ವಾನ್‌ರನ್ನು ನೋಡಿ ಹೀಗಾಗಲು ನಮಗೆ ಅಸಾಧ್ಯ ಎಂದುಕೊಂಡಿದ್ದೆವು. ಆದರೆ ಮಹಿಳೆ ಕೂಡ ಪುರುಷರಂತೆ ಮಲ್ಲಯುದ್ಧದಲ್ಲಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಸರ್ಕಾರ-ಸಂಘಟನೆಗಳು ವೇದಿಕೆ ಕಲ್ಪಿಸಿಕೊಟ್ಟಿದ್ದು ನೋಡಿದರೆ ಖುಷಿಯಾಗುತ್ತದೆ. ಕುಸ್ತಿಹಬ್ಬ ಆಯೋಜಕರಿಗೆ ನನ್ನ ಧನ್ಯವಾದಗಳು ಎಂದಳು.
ಅಕ್ಕನಂತಾಗುವಾಸೆ: ಇನ್ನು ಕರ್ನಾಟಕ ಕಿಶೋರಿಯಾಗಿ ಹೊರಹೊಮ್ಮಿದ ಶಾಲಿನಿ ಸಿದ್ದಿ ಕೂಡ ಧಾರವಾಡ ಕುಸ್ತಿಹಬ್ಬದ ಅಖಾಡಾದಲ್ಲಿ ಅಬ್ಬರಿಸಿದ ಪರಿಗೆ ಪ್ರೇಕ್ಷಕರೇ ದಂಗಾಗಿ ಹೋದರು. ಅವಳು ಆರಂಭದ ರೌಂಡ್ಸ್‌ನಿಂದಲೂ ತುಂಬಾ ಬಿರುಸು ಕಟ್ಟಾಗಿಯೇ ಕುಸ್ತಿಯಾಡಿದ್ದು ವಿಶೇಷವಾಗಿತ್ತು. ಫೈನಲ್‌ನಲ್ಲಿ ಕೂಡ ಅತ್ಯಂತ ಕಠಿಣ ಪಂದ್ಯವನ್ನು ಎದುರಿಸಿ ತನ್ನ ಎದುರಾಳಿಯನ್ನು ಎದುರಿಸಿ ಕರ್ನಾಟಕ ಕಿಶೋರಿಯಾಗಿ ಹೊರ ಹೊಮ್ಮಿದಳು.
ಶಾಲಿನಿ ಸಿದ್ದಿ ಕುಸ್ತಿಯ ಕಸರತ್ತಿನ ಗುಟ್ಟು ಕೂಡ ಲೀನಾ ಸಿದ್ದಿಯಂತೆಯೇ ಇದ್ದು, ಇವಳು ಕೂಡ ದೇಶಿ ಆಹಾರ ಪದ್ಧತಿ ಮತ್ತು ದೇಶಿ ಕುಸ್ತಿ ಅಖಾಡಾ ತಂತ್ರಾಂಶಗಳನ್ನೆ ಇಟ್ಟುಕೊಂಡು ಸಾಧನೆ ಮಾಡಿದ್ದಾಳೆ. ಈ ಕುರಿತು ಅತ್ಯಂತ ಹೆಮ್ಮೆ ಇರುವ ಶಾಲಿನಿ, ಮುಂದೊಂದು ದಿನ ತಾನು ತನ್ನ ಸಿದ್ದಿ ಸಹೋದರಿ ಲೀನಾ ಸಿದ್ದಿಯಂತೆಯೇ ಕರ್ನಾಟಕ ಮಹಿಳಾ ಕೇಸರಿಯಾಗುವ ಕನಸು ಹೊಂದಿದ್ದಾಳೆ.
ತುಕಾರಾಮ್ ನನ್ನ ಗುರುಗಳು. ಅವರ ಮಾರ್ಗದರ್ಶನದಲ್ಲಿ ಕುಸ್ತಿಯಾಡುತ್ತಿದ್ದೇನೆ. ದಸರಾದಲ್ಲಿ ಒಂದು ಬಾರಿ ಕೇಸರಿಯಾಗಿದ್ದೇನೆ. ನನ್ನ ತಂದೆ ಮತ್ತು ನಮ್ಮ ಬುಡಕಟ್ಟು ಆಹಾರ ಪದ್ಧತಿಯೇ ನನ್ನ ಕುಸ್ತಿಯ ಗುಟ್ಟು. –
ಲೀನಾ ಸಿದ್ದಿ, ಹಳಿಯಾಳ ಕರ್ನಾಟಕ ಮಹಿಳಾ ಕೇಸರಿ, (62 ಕೆ.ಜಿ.)
-ಬಸವರಾಜ ಹೊಂಗಲ್