ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಾ ಸರ್ಕಾರದ ಶಾಂತಿ ಕದಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಸಮನ್ವಯ ಸಮಿತಿ ಸಂಚಾಲಕ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಅವರಿಗೆ ಹ್ಯಾಂಡ್‌ಸಮ್ ಆಗಿ ಕಾಣುತ್ತಿದ್ದರೆ, ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ.
ಭಾನುವಾರ ಸಮನ್ವಯ ಸಮಿತಿ ಸಭೆಗೂ ಮುನ್ನ ಸಿದ್ದರಾಮಯ್ಯ ಕಾಲೆಳೆದ ಡಾನಿಷ್ ಅಲಿ, ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ಬಂದ ನಂತರ ಹ್ಯಾಂಡ್‌ಸಮ್ ಆಗಿದ್ದೀರಾ. ಅಲ್ಲದೆ, ಈಗಿರುವ
ವಯಸ್ಸಿಗಿಂತ ಹತ್ತು ವರ್ಷ ಚಿಕ್ಕವರಾಗಿ ಕಾಣುತ್ತಿದ್ದೀರಾ ಎಂದು ಹೇಳಿದರು.
ಅಲ್ಲೇ ಇದ್ದ ವೇಣುಗೋಪಾಲ್ ಕೂಡ ಇದಕ್ಕೆ ದನಿಗೂಡಿಸಿ,ಯು ಆರ್ ಲುಕ್ಕಿಂಗ್ ಸೋ ಸ್ಮಾರ್ಟ್ ಎಂದು ಸಿದ್ದರಾಮಯ್ಯ ಅವರನ್ನು ಬಣ್ಣಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಯ್ಯೋ ಈ ವಯಸ್ಸಲ್ಲಿ ನಾನೆಂತಾ ಹ್ಯಾಂಡ್‌ಸಮ್ ಮತ್ತು ಸ್ಮಾರ್ಟ್? ಪ್ರಕೃತಿ ಚಿಕಿತ್ಸೆ ಪಡೆದು ಎರಡೂವರೆ ಕೆ.ಜಿ. ಕಮ್ಮಿಯಾಗಿದ್ದೇನೆ ಅಷ್ಟೆ ಎಂದಾಗ, ಫುಡ್ ಕಂಟ್ರೋಲ್ ಮಾಡಿದ್ರೆ ಹೀಗೆಯೇ ಸ್ಮಾರ್ಟ್ ಆಗಿರುತ್ತೀರಾ ಎಂದು ವೇಣುಗೋಪಾಲ್ ಸಲಹೆ ನೀಡಿದರು.
ಮಧ್ಯಪ್ರವೇಶಿಸಿದ ಸಿಎಂ ಕುಮಾರಸ್ವಾಮಿ, ಫುಡ್‌ಕಂಟ್ರೋಲ್ ಸರಿ. ಆದರೆ, ಅವರಿಗೆ ಮಧ್ಯಾಹ್ನ ನಾನ್‌ವೆಜ್ ಇಲ್ಲಾ
ಅಂದ್ರೆ ಕಷ್ಟ ಎಂದಾಗ, ಹೌದು ಎಂದು ಸಿದ್ದರಾಮಯ್ಯ ತಲೆಯಾಡಿಸಿದರು. ಅಲ್ಲದೆ, ಶಾಂತಿವನದಲ್ಲಿ ನೀಡುವ ಆಹಾರ ಸೇವಿಸುವುದು ಕಷ್ಟ ಎಂದು ಮಾತು ಮುಂದುವರಿಸಿದಾಗ, ಅಲ್ಲಿ ಊಟ-ತಿಂಡಿಯದ್ದೇ ಫಜೀತಿ ಎಂದು ಕುಮಾರಸ್ವಾಮಿ ಧ್ವನಿಗೂಡಿಸಿದರು.