Advertisement

ಸಿದ್ದು ಓಬಿಸಿ ವಿರೋಧಿ: ಚೌಹಾಣ್‌

06:45 AM Jan 15, 2018 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗೆ ರಾಜ್ಯಸಭೆಯಲ್ಲಿ
ಕಾಂಗ್ರೆಸ್‌ ಅಡ್ಡಿಪಡಿಸಿದರೂ ಈ ಬಗ್ಗೆ ಮೌನ ತಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ವಿರೋಧಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಸಚಿವ ದಾರಾಸಿಂಗ್‌ ಚೌಹಾಣ್‌ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದ ಅವರು,ಹಿಂದುಳಿದ ವರ್ಗದ ಜನರಿಗೆ ಹಲವು ಸೌಲಭ್ಯ ನೀಡಬೇಕು ಎಂಬ ಉದ್ದೇಶದಿಂದ ಬಿಶಾವರ್‌ ಆಯೋಗದ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡನೆ ಮಾಡಿತು. ಅಲ್ಲಿ ಅನಿವಾರ್ಯವಾಗಿ ಮಸೂದೆಗೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್‌, ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಕಾರಣಕ್ಕೆ ಹಿಂದುಳಿದ ವರ್ಗದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಈ ಮಸೂದೆಗೆ ಅಡ್ಡಿಪಡಿಸಿ ಹಿಂದುಳಿದವರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು. 

ಹಿಂದುಳಿದವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋಮುಗಲಭೆ, ಭ್ರಷ್ಟಾಚಾರ ಮಾಡುವ ಮೂಲಕ ಹಿಂದುಳಿದ ವರ್ಗದವರು ಅವರ ಮೇಲಿಟ್ಟ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಹಿಂದುಳಿದ  ವರ್ಗ ಬಿಜೆಪಿ ಪರವಾಗಿದೆ ಎಂಬ ಸಂದೇಶ ಕಾಂಗ್ರೆಸ್‌ ಸರ್ಕಾರಕ್ಕೆ ತಿಳಿಯುವಂತೆ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.

ಟಿಕೆಟ್‌ಗಾಗಿ ಮುಗಿಬಿದ್ದ ಮುಖಂಡರು 
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿಶೇಷ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ದಾರಾಸಿಂಗ್‌ ಚೌಹಾಣ್‌ ಅವರಿಗೆ ಮುಗಿಬಿದ್ದ ಪ್ರಸಂಗ ನಡೆಯಿತು. ಸಭೆ ಉದ್ಘಾಟನೆ ಮುಗಿಸಿ ಚರ್ಚೆ ಆರಂಭವಾಗುತ್ತಿದ್ದಂತೆ ಕೆಲವು ಮುಖಂಡರು ದಾರಾಸಿಂಗ್‌ ಅವರ ಬಳಿ ಬಂದು, ಸರ್‌, ಪಕ್ಷಕ್ಕೆ ದುಡಿದಿದ್ದೇವೆ. ಜೈಲಿಗೂ ಹೋಗಿ ಬಂದಿದ್ದೇವೆ. ಆದರೆ, ಚುನಾವಣೆ ವೇಳೆ ಬೇಕಾದವರಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತಿದೆ. ಹಿಂದುಳಿದ ವರ್ಗದವರು ಎಂದು ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ವಿಚಲಿತರಾದ ದಾರಾಸಿಂಗ್‌, ಸಭೆಯಲ್ಲಿದ್ದ ಕೆ.ಎಸ್‌.ಈಶ್ವರಪ್ಪ ಮತ್ತು ಬಿ.ಜೆ.ಪುಟ್ಟಸ್ವಾಮಿ ಅವರತ್ತ ನೋಡಿದರು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಈಶ್ವರಪ್ಪ, ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತನ್ನಿ. ಹೈಕಮಾಂಡ್‌ ಸರ್ವೆ ನಡೆಸಿ ಟಿಕೆಟ… ನೀಡುತ್ತದೆ ಎಂದರು. ಆದರೂ ಟಿಕೆಟ್‌ಗಾಗಿ ಒತ್ತಾಯ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next