Advertisement

ಸಿದ್ದು, ಇಬ್ರಾಹಿಂ ಭಾಷಣಕ್ಕೆ ನಿರ್ಬಂಧ ಹೇರಿ

01:00 AM May 14, 2019 | Lakshmi GovindaRaj |

ಬೆಂಗಳೂರು: ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಸುಳ್ಳು ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಉಪಚುನಾವಣೆ ಮತದಾನ ಮುಗಿಯುವವರೆಗೆ ಸಾರ್ವಜನಿಕ ಭಾಷಣ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿ ರಾಜ್ಯ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Advertisement

ವಿಧಾನ ಪರಿಷತ್‌ ಸದಸ್ಯ ಅರುಣ್‌ ಶಹಾಪುರ, ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದ ಸಂಚಾಲಕ ಎಸ್‌.ಶಾಂತಾರಾಮ್‌, ಸಹ ಸಂಚಾಲಕ ಶ್ರೀನಾಥ್‌ ಶ್ವೇತಾದ್ರಿ ಇತರರಿದ್ದ ನಿಯೋಗ ಆಯೋಗಕ್ಕೆ ದೂರು ನೀಡಿತು.

ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರ ಬಗ್ಗೆ ಸುಳ್ಳು ಆರೋಪ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು, ಶಾಂತಿಗೆ ಭಂಗ ತರಲು ಪ್ರೇರಣೆ ನೀಡುತ್ತಿರುವಂತಿದೆ. ಚಿಂಚೋಳಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವಾಗ, ಪ್ರಧಾನಿ ನರೇಂದ್ರ ಮೋದಿಯವರು ವಂಚಕರಾಗಿದ್ದು,

-ವಿದೇಶಗಳಿಗೆ ತೆರಳಿ ಸಾರ್ವಜನಿಕರ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಧರ್ಮ, ಜಾತಿ ಆಧಾರಿತವಾಗಿ ಜನರನ್ನು ವಿಭಜಿಸುತ್ತಿದ್ದಾರೆ. ಮೋದಿಯವರು ಸುಳ್ಳುಗಾರರಾಗಿದ್ದು, ಚುನಾವಣೆ ಸಂದರ್ಭದಲ್ಲಿ ಜನರಿಗೆ ಸುಳ್ಳು ಹೇಳುವುದೇ ಅವರ ಕಾಯಕ ಎಂದು ಆರೋಪಿಸಿದ್ದಾರೆ ಎಂದು ನಿಯೋಗ ದೂರಿನಲ್ಲಿ ತಿಳಿಸಿದೆ.

ಮಹಾತ್ಮ ಗಾಂಧಿಯವರನ್ನು ಕೊಂದು ಬಿಜೆಪಿಯವರು ಜೈಲಿಗೆ ಹೋಗಿದ್ದರು ಎಂದು ಸಿದ್ದರಾಮಯ್ಯ ಸುಳ್ಳು ಆರೋಪ ಮಾಡಿದ್ದಾರೆ. ಅಧೀನ ನ್ಯಾಯಾಲಯವು ಮಹಾತ್ಮ ಗಾಂಧಿಯವರ ಸಾವಿಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ಹೇಳಿದ್ದರೂ ಸಿದ್ದರಾಮಯ್ಯ ಸುಳ್ಳು ಆರೋಪ ಮಾಡಿದ್ದಾರೆ.

Advertisement

ಇದು ಸಮಾಜದಲ್ಲಿ ಸೌಹಾರ್ದ ಕೆಡಿಸುವಂತಿದ್ದು, ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸಿದ್ದರಾಮಯ್ಯ ಅವರು ಪದೇ ಪದೇ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ವಾತಾವರಣ ಸೃಷ್ಟಿಗೆ ಕಾರಣಾಗಿದ್ದಾರೆ. ಜಾತಿ, ಉಪಜಾತಿಗಳ ಹೆಸರಿನಲ್ಲಿ ಜನರ ನಡುವೆ ಕಂದಕ ಸೃಷ್ಟಿಸುತ್ತಿದ್ದು, ಇದೆಲ್ಲಾ ಫ‌ಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಉಲ್ಲೇಖೀಸಲಾಗಿದೆ.

ಇಬ್ರಾಹಿಂ ವಿರುದ್ಧವೂ ದೂರು: ಕಾಂಗ್ರೆಸ್‌ ನಾಯಕ ಸಿ.ಎಂ. ಇಬ್ರಾಹಿಂ ಚಿಂಚೋಳಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಲಿಯುಗದ ರಾವಣ ಎಂದು ಟೀಕಿಸಿದ್ದಾರೆ. ಈ ಹೇಳಿಕೆಯು ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆ ಜತೆಗೆ ರಾಜಕೀಯ ಪಕ್ಷಗಳು ಹಾಗೂ ಹಿಂಬಾಲಕರ ನಡುವೆ ದ್ವೇಷ ಮೂಡಿಸುವಂತಿದ್ದು, ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಂತಿದೆ. ಅವರು ಪ್ರಧಾನಿಯವರ ಖಾಸಗಿ ಬದುಕು ಹಾಗೂ ಚಾರಿತ್ರ್ಯ ಕುರಿತು ವೈಯಕ್ತಿಕ ದಾಳಿ ನಡೆಸಿದ್ದಾರೆ ಎಂದು ದೂರಿದೆ.

ಸಿ.ಎಂ.ಇಬ್ರಾಹಿಂ ಅವರು ನಿರಂತರವಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಭಾಷಣ ಮಾಡಲು ಅವಕಾಶ ನೀಡಿದರೆ ಮುಂದೆಯೂ ಇದೇ ರೀತಿಯ ಆರೋಪಗಳನ್ನು ಮಾಡುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ 72 ಗಂಟೆ ಕಾಲ ಸಿ.ಎಂ. ಇಬ್ರಾಹಿಂ ಅವರು ರಾಜ್ಯದಲ್ಲಿ ಭಾಷಣ ಮಾಡದಂತೆ ಆಯೋಗ ನಿರ್ಬಂಧ ವಿಧಿಸಬೇಕು. ಮತದಾನ ನಡೆಯುವ ದಿನಾಂಕದವರೆಗೆ ನಿರ್ಬಂಧ ಮುಂದುವರಿಸಬೇಕು ಎಂದು ಕೋರಿದೆ.

ಹಣ ಹಂಚಿಕೆ ದೂರು: ಕುಂದಗೋಳ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಸಚಿವ ಡಿ.ಕೆ.ಶಿವಕುಮಾರ್‌ ಅವರು ಖಾಸಗಿ ಹೋಟೆಲ್‌ನಲ್ಲಿ ನಾನಾ ಸಮುದಾಯಗಳ ನಾಯಕರು, ಮುಖಂಡರು, ಸ್ಥಳೀಯ ಪ್ರಭಾವಿಗಳಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ. ಇದು ಚುನಾವಣಾ ಫ‌ಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಕಾಂಗ್ರೆಸ್‌ ಪರವಾಗಿ ಕಾರ್ಯ ನಿರ್ವಹಿಸುವಂತೆ ಪ್ರಭಾವ ಬೀರುತ್ತಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರು ಹಾಲಿ ಸಚಿವರಾಗಿರುವುದರಿಂದ ಅಧಿಕಾರಿಗಳು ಕೂಡ ಹಣ ಹಂಚಿಕೆಗೆ ಸಹಕಾರ ನೀಡುತ್ತಿದ್ದಾರೆ. ಕೂಡಲೇ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ತೀವ್ರ ನಿಗಾ ವಹಿಸುವ ಜತೆಗೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಬಿಜೆಪಿ ಮನವಿ ಮಾಡಿದೆ.

ಶಾಂತಿಗೆ ಭಂಗ ತರುವ ಅಪಾಯ: ಸಿದ್ದರಾಮಯ್ಯ ಅವರು ಭಾಷಣ ಮಾಡಲು ಅವಕಾಶ ನೀಡಿದರೆ ಅವರ ಹೇಳಿಕೆಗಳು ಮತದಾನದ ಹೊತ್ತಿಗೆ ಶಾಂತಿಗೆ ಭಂಗ ತರುವ ಅಪಾಯವಿದೆ. ಈ ರೀತಿಯ ಹೇಳಿಕೆ ನೀಡುವವರು ಭಾಷಣ ಮಾಡುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ನಡೆಸಬೇಕು ಎಂಬ ನಿಯಮವಿದೆ. ಸಿದ್ದರಾಮಯ್ಯ ಅವರ ಹೇಳಿಕೆಗಳ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸಂವಿಧಾನದ 324ನೇ ವಿಧಿಯನ್ವಯ ಇಂತಹವರು ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುವುದನ್ನು ನಿರ್ಬಂಧಿಸುವ ಅಧಿಕಾರ ಆಯೋಗಕ್ಕಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ 72 ಗಂಟೆ ಕಾಲ ಸಿದ್ದರಾಮಯ್ಯ ಅವರು ಸಾರ್ವಜನಿಕ ಸಭೆ ನಡೆಸುವುದನನು ನಿಷೇಧಿಸಬೇಕು. ಮತದಾನ ಮುಗಿಯುವವರೆಗೆ ನಿರ್ಬಂಧ ಮುಂದುವರಿಸಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next