ಬಾಗಲಕೋಟೆ: ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ಪ್ರಚಾರ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳಲ್ಲಿ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿದಿವೆ. ಮೈಸೂರಿನಲ್ಲಿ ತಮ್ಮ ಸೋಲಿಗೆ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದು ಸುಳ್ಳು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೆಲ್ಲ ಅಣ್ಣ-ತಮ್ಮಂದಿರಂತೆ ಇದ್ದೇವೆ. ಒಳ ಹೊಡೆತ, ಒಳ ಏಟು ಯಾವುದೂ ಇಲ್ಲ. ಮೈತ್ರಿ ಪಕ್ಷಗಳು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿವೆ. ಆಗ ಎಲ್ಲ ವಿಷಯ ಗೊತ್ತಾಗಲಿದೆ.
ದೇಶದ ಬಡ ಜನರಿಗೂ ತಲುಪುವ ಯೋಜನೆಗಳ ಉತ್ತಮ ಪ್ರಣಾಳಿಕೆಯನ್ನು ಕಾಂಗ್ರೆಸ್ ನೀಡಿದೆ. ಇದರಿಂದ ಪ್ರಧಾನಿ ಮೋದಿ ಸಹಿತ ಬಿಜೆಪಿಗೆ ನಡುಕ ಶುರುವಾಗಿದೆ. ಹೀಗಾಗಿ ಮತದಾರರ ಸೆಳೆಯಲು ಹಲವು ತಂತ್ರಗಾರಿಕೆ ನಡೆಸಿದ್ದಾರೆ. ನಮ್ಮ ಪ್ರಣಾಳಿಕೆ ರೀತಿಯೇ ಅವರೂ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ ಎಂದರು.
ರಾಜಸ್ಥಾನದ ರಾಜ್ಯಪಾಲ ಕಲ್ಯಾಣ ಸಿಂಗ್, ನಾನೊಬ್ಬ ಬಿಜೆಪಿ ಕಾರ್ಯಕರ್ತ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿದ್ದಾರೆ. ಸಂವಿಧಾನಬದ್ಧವಾಗಿ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಈ ರೀತಿ ಹೇಳುವುದು ಸರಿಯಲ್ಲ.
ರಾಜ್ಯಪಾಲ ಹುದ್ದೆಯಿಂದ ಹೊರ ಬಂದು ಆ ರೀತಿ ಹೇಳಿಕೊಳ್ಳಲಿ. ಚುನಾವಣೆ ಆಯೋಗ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದರು.
ಯೋಗಿ ಗೃಹ ಬಂಧನದಲ್ಲಿಡಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಕರೆದು ದೇಶದ್ರೋಹ ಮಾಡಿದ್ದಾರೆ. ಭಾರತೀಯ ಸೇನೆಯನ್ನು ತಮ್ಮ ರಾಜಕೀಯಕ್ಕೆ ಬಳಸುವುದು ಸರಿಯಲ್ಲ.
ಇಂತಹ ಹೀನ ಕೆಲಸ ಈವರೆಗೆ ಯಾರೂ ಮಾಡಿರಲಿಲ್ಲ. ಚುನಾವಣೆ ಮುಗಿಯುವವರೆಗೂ ಅವರನ್ನು ಗೃಹ ಬಂಧನದಲ್ಲಿ ಇಡಬೇಕು. ಚುನಾವಣೆ ಆಯೋಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮದು ಲವ್ ಮ್ಯಾರೇಜ್, ಅರೇಂಜ್ ಮ್ಯಾರೇಜ್ ಎರಡೂ ಇದ್ದಂತೆ. ಒಂದು ರೀತಿ ಗ್ರಾಮೀಣ ಭಾಗದ ಪ್ರೀತಿ ಇದ್ದಂತೆ.
-ಎಚ್.ಕೆ. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ