Advertisement

ಸಿದ್ದು ಸಿಎಂ: ಶಾಸಕರದ್ದು ವೈಯಕ್ತಿಕ ಅಭಿಪ್ರಾಯ

07:24 AM Jan 29, 2019 | |

ರಾಮನಗರ: ನಮ್ಮ ಸಿಎಂ ಸಿದ್ದರಾಮಯ್ಯ ಎಂದು ಕೆಲವು ಶಾಸಕರು ಹೇಳಿಕೊಂಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮ ಮತ್ತು ರಾಜ್ಯಕ್ಕೆ ಎಚ್.ಡಿ. ಕುಮಾರಸ್ವಾಮಿ ಸಿಎಂ ಎಂದು ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

Advertisement

ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಲಿಮಿಟೆಡ್‌ಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಸಕರ ವೈಯಕ್ತಿಕ ಅಭಿಪ್ರಾಯಗಳಿಗೆ ಇಷ್ಟೊಂದು ಮಹತ್ವ ಕೊಡುವುದು ತಪ್ಪು. ಶಾಸಕರು ಸಹ ಹೀಗೆ ಬಹಿರಂಗ ಹೇಳಿಕೆಗಳನ್ನು ಕೊಡುವುದು ತಪ್ಪು. ಮೈತ್ರಿ ಸರ್ಕಾರ ಸುಭದ್ರವಾಗಿದೆ. ಎಲ್ಲಾ ಶಾಸಕರು ಒಗ್ಗಟ್ಟಿನಿಂದಿದ್ದಾರೆ ಎಂದು ತಿಳಿಸಿದರು.

ವೈಯಕ್ತಿಕ ದ್ವೇಷ ಇಲ್ಲ: ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಎಲ್ಲಾ ಬೇಡಿಕೆಗಳನ್ನು ಒಂದೇ ಬಾರಿಗೆ ಈಡೇರಿಸಲು ಆಗುವುದಿಲ್ಲ. ಹೀಗಾಗಿ ಕೆಲವರಿಗೆ ಬೇಸರ ಇರಬಹುದು. ವೈಯಕ್ತಿಕ ದ್ವೇಷವೇನು ಇಲ್ಲ. ಅಣ್ಣ-ತಮ್ಮಂದಿರು, ಗಂಡ-ಹೆಂಡತಿ ನಡುವೆಯೂ ಅಸಮಾಧಾನ ಇರುತ್ತದೆ. ಹಾಗೆ ಇಲ್ಲೂ ಇರಬಹುದು. ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾಗಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಇದ್ದಾರೆ. ಅವರು ಪಕ್ಷದ ಶಾಸಕರ ಬಗ್ಗೆ ಗಮನಹರಿಸುತ್ತಾರೆ ಎಂದು ಹೇಳಿದರು.

ಸರ್ಕಾರ ರಚನೆಗೆ ಅವಕಾಶ ಸಿಕ್ಕಿದ್ದೆ ಬಿಜೆಪಿಗೆ: 104 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ಸಿಕ್ಕಿತ್ತು. ಆದರೆ, ಆಗ ಅವರು ಬಹುಮತ ಸಾಬೀತು ಮಾಡಲಾಗಲಿಲ್ಲ. ಹೀಗಾಗಿ ಮೈತ್ರಿ ಪಕ್ಷಗಳು ಒಂದಾಗಿ ಸಂಖ್ಯಾಬಲ ಸಾಬೀತು ಮಾಡಿ ಸರ್ಕಾರ ನಡೆಸುತ್ತಿದ್ದೇವೆ ಎಂದರು. ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ಉರುಳಿಸುವ ಮಾತನಾಡುತ್ತಿದೆ. ಆಗ, ಈಗ ಎನ್ನುತ್ತಿದ್ದಾರೆ. ನಮಗೂ ಕೇಳಿ ಕೇಳಿ ಸಕಾಗಿದೆ. ಬಿಜೆಪಿಗೆ ಹೋಗಲಿಚ್ಚಿಸಿರುವ ಸಚಿವರು, ಶಾಸಕರನ್ನು ಕಾಂಗ್ರೆಸ್‌ ಬಲವಂತವಾಗಿ ಹಿಡಿದುಕೊಂಡಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯನ್ನೇ ಹಿಡಿದಿಟ್ಟು ಕೊಳ್ಳಲು ಆಗುವುದಿಲ್ಲ. ಇನ್ನು ಶಾಸಕರನ್ನು ಹಿಡಿದಿಟ್ಟು ಕೊಳ್ಳಲು ಆಗುತ್ತಾ ಎಂದರು. ಯಾರು, ಯಾರನ್ನು ಬಲವಂತವಾಗಿ ಹಿಡಿದಿಟ್ಟು ಕೊಳ್ಳಲು ಆಗೋಲ್ಲ ಎಂದರು.

ಕಾನೂನು ಎಲ್ಲರಿಗೂ ಒಂದೇ: ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ. ಈಗಾಗಲೇ ಸಿಎಂ ಮತ್ತು ಡಿಸಿಎಂ ಸ್ಪಷ್ಟಪಡಿಸಿದ್ದಾರೆ. ಕಂಪ್ಲಿ ಶಾಸಕನ ಬಂಧನಕ್ಕೆ ಗೃಹ ಇಲಾಖೆ ವೈಫ‌ಲ್ಯವಿಲ್ಲ. ಗೃಹ ಇಲಾಖೆಗೆ ದೊಡ್ಡ ಹೊಣೆಗಾರಿಕೆ ಇದೆ. ಸಮರ್ಥ ಅಧಿಕಾರಿಗಳಿದ್ದಾರೆ. ಗೃಹ ಇಲಾಖೆ ಚೆನ್ನಾಗಿ ನಡೆಯುತ್ತಿದೆ. ಕಾನೂನಿನಂತೆ ಕ್ರಮ ಕೈಗೊಳ್ಳುತ್ತಾರೆ. ಆನಂದ್‌ ಸಿಂಗ್‌ ಚೆನ್ನಾಗಿದ್ದಾರೆ. ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಆನಂದ್‌ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

Advertisement

ಸ್ಟೀಲ್‌ ಬ್ರಿಡ್ಜ್ ಅವಶ್ಯವಿದೆ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸ್ಟೀಲ್‌ ಬ್ರಿಡ್ಜ್ ಅವಶ್ಯವಿದೆ. ಆ ಭಾಗದ ಜನ ಸ್ಟೀಲ್‌ ಬ್ರಿಡ್ಜ್ ಕೇವಲ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಎಂದು ತಿಳಿದುಕೊಂಡಿದ್ದಾರೆ. ಹೆಬ್ಟಾಳ, ಕೆ.ಆರ್‌.ಪುರ, ವೈಟ್ ಫೀಲ್ಡ್‌ ಕಡೆ ಹೋಗುವ ಕಡೆ ಸಂಚಾರ ದಟ್ಟಣೆಗೆ ಉತ್ತರ ಸಿಗಲಿದೆ. ಕೆಲವರು ಜನರ ಸಮಸ್ಯೆಯನ್ನು ಗಮನಿಸುತ್ತಿಲ್ಲ. ಅಸಲಿಗೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸ್ಟೀಲ್‌ ಬ್ರಿಡ್ಜ್ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಅವರು ಮಾಡಿದ್ದರೆ ಸರಿ, ನಾವು ಮಾಡಿದ್ರೆ ತಪ್ಪು ಎನ್ನುತ್ತಿದ್ದಾರೆ. ಕೆಲವರಷ್ಟೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಹೊಸೂರು, ಮೈಸೂರು ರಸ್ತೆ ಮೇಲು ಸೇತುವೆಗಳು ಇಲ್ಲದಿದ್ದರೆ ಹೇಗೆ ಎಂಬದನ್ನು ಊಹಿಸಬೇಕು. ಬೆಂಗಳೂರಿನಲ್ಲಿ 1.20 ಕೋಟಿ ಜನ ವಾಸವಿದ್ದಾರೆ. 60ರಿಂದ 70ಲಕ್ಷ ವಾಹನಗಳು ನಗರದಲ್ಲಿ ಸಂಚಾರ ಮಾಡುತ್ತವೆ. ಸಂಚಾರ ವ್ಯವಸ್ಥೆ ಸುಗಮವಾಗಲು ಎಲಿವೇಟೆಡ್‌ ಕಾರಿಡಾರ್‌, ಸಿಗ್ನಲ್‌ ಫ್ರೀ ಕಾರಿಡಾರ್‌ ಅವಶ್ಯವಿದೆ. 100 ಕಿ.ಮಿ ಎಲಿವೇಟೆಡ್‌ ಕಾರಿಡಾರ್‌ ಆಗದಿದ್ದರೆ ಬೆಂಗಳೂರು ನಗರದ ಸಂಚಾರ ಸುಧಾರಿಸಲು ಕಷ್ಟ ಎಂದರು.

ಮರ ಕಡಿಯದೇ ಅಭಿವೃದ್ಧಿ ಅಸಾಧ್ಯ: ಮರ ಕಡಿಯದೇ ಅಭಿವೃದ್ಧಿ ಆಗುವುದಿಲ್ಲ. ಕಡಿಮೆ ಮರಗಳನ್ನು ಕಡಿಯಲು ಚಿಂತನೆ ನಡೆಸಬಹುದು. ಒಂದು ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಟ್ಟು ಬೆಳಸಬಹುದು. 1.20 ಕೋಟಿ ಜನರ ಪೈಕಿ 300 ಮಂದಿ ವಿರೋಧಿಸಿದರೆ ಅದು ಜನಾಭಿಪ್ರಾಯ ಎನ್ನಲು ಸಾಧ್ಯವೆ ಎಂದು ಪ್ರಶ್ನಿಸಿದರು. ಬೇಡವೇ ಬೇಡ ಎಂದರೆ ಚರ್ಚೆಗಳು ಆಗಲಿ, ತಜ್ಞರು ಅದಕ್ಕೆ ಉತ್ತರ ನೀಡುತ್ತಾರೆ. ಮೆಟ್ರೋ ಯೋಜನೆ ನಿರಂತರ ವಿಸ್ತಾರವಾಗುವ ಯೋಜನೆ. ಮೆಟ್ರೋ ಯೋಜನೆ ಕೆಂಗೇರಿವರೆಗೂ ಬಂದಿದೆ, ಬಿಡದಿಗೂ ವಿಸ್ತರಣೆ ಆಗುತ್ತದೆ. ಆದರೆ, ಸಮಯ ಬೇಕು ಎಂದರು.

ಈ ವೇಳೆ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು, ಕೆಐಡಿಬಿ ಸಿಇಒ ಶಿವಶಂಕರ್‌, ಬಿಡದಿ ಕೈಗಾರಿಕಾ ಸಂಘದ ರಾಜೇಂದ್ರ ಹೆಗ್ಡೆ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಸ್‌.ಹೊನಮನೆ ಹಾಜರಿದ್ದರು.

ಟೊಯೋಟದಲ್ಲಿ ಪರಿಸರ ಸ್ನೇಹಿ ವಾತಾವರಣ: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ಸೌರ ಶಕ್ತಿ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಟೊಯೋಟದಲ್ಲಿ ಪರಿಸರ ಸ್ನೇಹಿ ವಾತಾವರಣವಿದೆ. ಇತರ ಕೈಗಾರಿಕೆಗಳಿಗೆ ಮಾದರಿಯಾಗಿದೆ.

ಪರಿಸರ ಸ್ನೇಹಿ ಮಾತ್ರವಲ್ಲದೇ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ವಿಚಾರದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದೆ. ಬಿಡದಿ ಕೈಗಾರಿಕಾ ಸಂಘದ ಮೂಲಕ ಸುತ್ತಮುತ್ತಲ 50ರಿಂದ 60 ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ವೃದ್ಧಿಗೆ ಟೊಯೋಟ ಪಾತ್ರವಹಿಸಿದೆ. ಶಾಲಾ ಕೊಠಡಿಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ, ಶುದ್ಧ ನೀರಿನ ಘಟಕಗಳ ಸ್ಥಾಪನೆ ಹೀಗೆ ಹಲವು ವಿಚಾರಗಳಲ್ಲಿ ಅದು ಸಕ್ರಿಯವಾಗಿದೆ ಎಂದರು.

ತಾವು ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ತಮ್ಮ ಖಾತೆ ಮತ್ತು ಕೈಗಾರಿಕೆಗಳ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಬೇಕಾಗಿದೆ. ಹೀಗಾಗಿ ತಾವು ಈಗಾಗಲೇ ಮೈಸೂರು, ಹುಬ್ಬಳಿ, ಬೆಳಗಾವಿ, ಕೋಲಾರ ಮುಂತಾದ ಕಡೆ ಕೈಗಾರಿಕೆಗಳನ್ನು ಭೇಟಿ ಮಾಡಿರುವುದಾಗಿ, ಕೈಗಾರಿಕೆಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟು ಕೊಳ್ಳಲು ಇಂತಹ ಭೇಟಿ ಸಹಕಾರಿಯಾಗುತ್ತವೆ. ಟೊಯೋಟ ಕಾರ್ಮಿಕರು ತಮ್ಮ ಬಳಿ ಮಾತನಾಡಿಲ್ಲ. ಹಾಗೊಮ್ಮೆ ಅವರು ಮನವಿ ಕೊಟ್ಟಿದ್ದರೆ ಸಂಬಂಧಿಸಿದ ಇಲಾಖೆಗೆ ಕೊಟ್ಟು ಸಹಕಾರ ನೀಡುತ್ತಿದ್ದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next