Advertisement

ಹಕ್ಕುಪತ್ರ ನೀಡಲು ಆಗ್ರಹಿಸಿ 8ರಂದು ಸಿದ್ದಿಗಳ ಪ್ರತಿಭಟನೆ

12:37 PM Jul 06, 2019 | Team Udayavani |

ಹಳಿಯಾಳ: ಕಳೆದ ಫೆಬ್ರವರಿಯಲ್ಲಿ ದೇಶದ ಸವೋಚ್ಚ ನ್ಯಾಯಾಲಯವು ಅರಣ್ಯ ಅತಿಕ್ರಮಣದಾರರನ್ನು ಅರಣ್ಯದಿಂದ ಹೊರ ಹಾಕುವಂತೆ ನೀಡಿದ ಆದೇಶವನ್ನು ಪುನಃ ಹಿಂದಕ್ಕೆ ಪಡೆದು ಅತಿಕ್ರಮಣದಾರರ ದಾಖಲೆಗಳನ್ನು ಮರುಪರಿಶೀಲನೆ ನಡೆಸುವಂತೆ ಆದೇಶಿಸಿದ್ದರು ಕೂಡ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅರಣ್ಯ ಇಲಾಖೆಯವರು ನಡೆದುಕೊಳ್ಳುತ್ತಿದ್ದು ಅರ್ಜಿ ಮರುಪರಿಶೀಲಿಸಲು ಉತ್ಸಾಹ ತೋರದೆ ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಸಿದ್ದಿ ಸಮುದಾಯದ ಹಿರಿಯ ಮುಖಂಡ ದಿಯೋಗ ಬಸ್ತಾಂವ ಸಿದ್ದಿ ಆರೋಪಿಸಿದರು.

Advertisement

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ಅರಣ್ಯ ರಕ್ಷಿಸುವುದರ ಮೂಲಕ ಅರಣ್ಯ ಮಧ್ಯದಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಿದ್ದಿ ಸಮುದಾಯದ ಜನರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಪಾದಿಸಿದ ಅವರು, ಈ ಮೂಲಕ ಬುಡಕಟ್ಟು ಸಿದ್ದಿ ಜನರನ್ನು ಬಿದಿಗೆ ತಳ್ಳುವ ಕೆಲಸವಾಗುತ್ತಿದೆ ಎಂದರು.

ಅಕ್ರಮ-ಸಕ್ರಮ ವಿಷಯದಲ್ಲಿ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಿ ಈ ಬಗ್ಗೆ ಪರಿಶೀಲನೆ ನಡೆಸಲು ಆದೇಶ ನೀಡುವುದರ ಮೂಲಕ ಅರಣ್ಯ ವಾಸಿಗಳ ಹಕ್ಕುಗಳಿಗೆ ಗೌರವ ನೀಡಲಾಗಿದೆ. ಜು.30ರ ವರೆಗೆ ಮರಳಿ ಮಾಹಿತಿ ರವಾನಿಸುವಂತೆ ಸವೊರ್ಚ್ಚ ನ್ಯಾಯಾಲಯ ಸೂಚನೆ ನೀಡಿದರೂ ಜಿಲ್ಲಾಡಳಿತ, ತಾಲೂಕಾಡಳಿತ ಆಸಕ್ತಿ ವಹಿಸದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕೋರ್ಟ್‌ ಗಡುವಿನ ನಂತರ ಮಾಹಿತಿ ನೀಡಿದ್ದೇ ಆದಲ್ಲಿ ಮತ್ತೆ ಅರಣ್ಯವಾಸಿಗಳ ಬದುಕು ಬಿದಿಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧಿಕಾರಿಗಳ ವರ್ತನೆಯಿಂದ ಬುಡಕಟ್ಟು ಸಿದ್ದಿ ಸಮುದಾಯದ ಜನರ ಪಾರಂಪರಿಕ ಬುಡಕಟ್ಟು ಹಕ್ಕಿಗೆ ಧಕ್ಕೆ ಬರಲಿದೆ ಎಂದು ಅಸಮಾಧಾನದಿಂದ ನುಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ 1100 ಸಿದ್ದಿ ಕುಟುಂಬದವರು ಹಕ್ಕು ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದು ಇದರಲ್ಲಿ 300 ಜನರ ಅರ್ಜಿ ಪರಿಶೀಲನೆಯ ಮುನ್ನವೇ ತಿರಸ್ಕರಿಸಿದ್ದು, ಕೇವಲ 118 ಜನರಿಗೆ ಮಾತ್ರ ಹಕ್ಕು ಪತ್ರ ವಿತರಿಸಲಾಗಿದೆ. ಸುಮಾರು 750ಕ್ಕೂ ಅಧಿಕ ಅರ್ಜಿಗಳು ಪಂಚಾಯತ ಕಚೇರಿಗಳಲ್ಲಿ ಧೂಳು ತಿನ್ನುತ್ತಿವೆ ಎಂದು ಕಿಡಿಕಾರಿದರು.

ಜು.8 ರಂದು ಸರ್ಕಾರದ ಗಮನ ಸೆಳೆಯಲು ಪಟ್ಟಣದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಇದಕ್ಕೂ ಸ್ಪಂದನೆ ದೊರೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ದಿಯೋಗ ಎಚ್ಚರಿಕೆ ನೀಡಿದರು.

Advertisement

ಸಿದ್ದಿ ಮುಖಂಡರಾದ ಇಮಾಮ್‌ ಸಿದ್ದಿ, ಸುನೀಲ್ ಸಿದ್ದಿ, ಇಸೆಂತ್‌ ಡಿಸೋಜಾ, ಮಹ್ಮದಸಾಬ ಸಿದ್ದಿ, ಗೋಪಾಲ ಸಿದ್ದಿ, ನಾರಾಯಣ ಸಿದ್ದಿ, ಜಯರಾಮ ಸಿದ್ದಿ, ಮಹ್ಮದಸಾಬ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next