ಮುಂಡರಗಿ: ಮಾನವ ಕುಲಕ್ಕೆ ಒಳಿತು ಆಗಬೇಕು. ವಿಶೇಷವಾಗಿ ರೈತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರಿಯಲು ಉತ್ತಮ ಬೆಳೆ ಬೆಳೆದು ಸಬಲರಾಗಬೇಕು. ಇಂತಹ ಸದುದ್ದೇಶ ಸೇರಿದಂತೆ ಲೋಕ ಕಲ್ಯಾಣಾರ್ಥವಾಗಿ ಅಂತೂರ-ಬೆಂತೂರ ಗ್ರಾಮದ ಶ್ರೀ ಬೂದೀಶ್ವರ ಸಂಸ್ಥಾನ ಮಠದ ಡಾ| ರಾಚೋಟೇಶ್ವರ ಶಿವಾಚಾರ್ಯರು ಸ್ವಾಮೀಜಿ 21 ದಿನಗಳ ಮೌನಾನುಷ್ಠಾನ ಹಾಗೂ 21 ದಿನಗಳ ಸಿದ್ಧಿ ಸಮಾಧಿಯೋಗದ ಸ್ಥಿತಿಯಲ್ಲಿ ಗುಹೆಯಲ್ಲಿ ಕುಳಿತಿದ್ದಾರೆ.
ಡಾ| ರಾಚೋಟೇಶ್ವರ ಶ್ರೀಗಳು ಅನುಷ್ಠಾನಕ್ಕೆ ಕುಳಿತಿರುವ ಗುಹೆಯೊಳಗೆ ಗಾಳಿ ಬೆಳಕು ಇಲ್ಲದೆ ಕತ್ತಲ ಕೋಣೆಯಾಗಿದೆ. ಶ್ರೀಗಳ ಅನುಷ್ಠಾನವು ಜೂನ್ 7ರಿಂದ ಪ್ರಾರಂಭವಾಗಿದೆ. ಸಿದ್ಧಿ ಸಮಾಧಿಸ್ಥಿತಿಯ ಅನುಷ್ಠಾನವು ಜೂನ್ 27ರಿಂದ ಪ್ರಾರಂಭಿಸಿದ್ದು, ಜುಲೈ 18ಕ್ಕೆ ಮುಕ್ತಾಯವಾಗಲಿದೆ. ಈ ಅನುಷ್ಠಾನಕ್ಕೆ ತನ್ನದೆ ಆದ ಇತಿಹಾಸ, ಧಾರ್ಮಿಕ ಹಿನ್ನೆಲೆಯಿದೆ. ಮೌನಾನುಷ್ಠಾನದ ಕೊನೆಯ ದಿನ ಭಕ್ತರು ಬಾಗಿಲು ಒಡೆದು ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಇದೊಂದು ತಪಸ್ಸಾಗಿದ್ದು, ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎನ್ನುತ್ತಾರೆ ಡೋಣಿ ಗ್ರಾಮಸ್ಥ ಶಂಕರಗೌಡ ಜಾಯನಗೌಡರ.
ಡಾ.ರಾಚೋಟೇಶ್ವರರ ಸ್ವಾಮೀಜಿಗಳ ಅನುಷ್ಠಾನದ ದರ್ಶನ ಪಡೆಯಲು ನೂರಾರು ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಪ್ರತಿದಿನವೂ ಬರುವ ಭಕ್ತರು ಗುಹೆಯ ಮುಂಭಾಗದಲ್ಲಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮರಳುತ್ತಿದ್ದಾರೆ.
Advertisement
ತಾಲೂಕಿನ ಕಪ್ಪತ್ತಗುಡ್ಡದ ಗೊಲಗೇರಿಮಠದ ಪಾರ್ವತಿ-ಪರಮೇಶ್ವರ ಗುಹೆಯಲ್ಲಿ ಮೌನಾನುಷ್ಠಾನ ಕುಳಿತಿದ್ದು, ಯಾರೊಂದಿಗೂ ಮಾತನಾಡುವುದಿಲ್ಲ. ಆಹಾರ ಸೇವನೆ ಮಾಡದೇ ನಿರಾಹಾರಿಗಳಾಗಿ ಶಿವನ ಜ್ಞಾನದಲ್ಲಿ ಅನುಷ್ಠಾನ ಕುಳಿತಿದ್ದಾರೆ. ವಿಶೇಷವೆಂದರೆ ಶ್ರೀಗಳು ಕುಳಿತಿರುವ ಅನುಷ್ಠಾನದ ಗುಹೆಯ ಒಳಗೆ ಪ್ರವೇಶ ಮಾಡುವ ಮಾರ್ಗವನ್ನು ಸಿಮೆಂಟ್ ಮತ್ತು ಇಟ್ಟಿಗೆಯಿಂದ ಮುಚ್ಚಿ ಗಾಳಿ-ಬೆಳಕು ಆಡದಂತೆ ಬಂದೋಬಸ್ತ್ ಮಾಡಲಾಗಿದೆ.
ಸಾಧಕರು ಯೋಗ ಸಾಧನೆಯ ಮೂಲಕ ಸಮಾಧಿ ಸ್ಥಿತಿಯನ್ನು ತಲುಪಬಹುದಾಗಿದೆ. ಪ್ರಾಣಾಯಾಮದ ಕೊನೆಯ ಹಂತವು ಸ್ಥಿತಿಯಾಗಿದೆ. ಸಹಜ ಮನುಷ್ಯನ ಉಸಿರಾಟವು ಒಂದು ನಿಮಿಷಕ್ಕೆ 18 ಬಾರಿ ಆದರೆ, ಅನುಲೋಮ-ವಿಲೋಮದಲ್ಲಿ ಒಂದು ನಿಮಿಷದಲ್ಲಿ 4ರಿಂದ 5 ಸಲ ಉಸಿರಾಡಬಹುದು. ಕುಂಭಯುಕ್ತ ಪ್ರಾಣಾಯಾಮದಲ್ಲಿ ಸಾಧಕರು 1ನಿಮಿಷಕ್ಕೆ ಒಂದೇ ಸಲ ಉಸಿರಾಟವನ್ನು ನಡೆಸುತ್ತಾರೆ. ಕುಂಭಯುಕ್ತ ಪ್ರಾಣಾಯಾಮವೇ ಸಮಾಧಿ ಸ್ಥಿತಿಯಲ್ಲಿ ಸಾಧಕರು ಇರುವಂತೆ ನೋಡಿಕೊಂಡು ಅನುಷ್ಠಾನ ಕುಳಿತುಕೊಳ್ಳಬಹುದಾಗಿದೆ ಎಂದು ಯೋಗ ಸಾಧಕರಾದ ಡಂಬಳದ ಜಿ.ವಿ. ಹಿರೇಮಠ ಅಭಿಪ್ರಾಯಪಡುತ್ತಾರೆ.
•ಹು.ಬಾ.ವಡ್ಡಟ್ಟಿ