Advertisement

1ರಿಂದ ಹುಬ್ಬಳ್ಳಿಯಲ್ಲಿ ಸಿದ್ಧೇಶ್ವರ ಶ್ರೀ ಪ್ರವಚನ

10:56 AM Feb 25, 2020 | Suhan S |

ಹುಬ್ಬಳ್ಳಿ: ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಕಾರ್ಯಕ್ರಮ ಮಾ. 1ರಿಂದ ಒಂದು ತಿಂಗಳವರೆಗೆ ಗೋಕುಲ ಗ್ರಾಮದ ರೇವಡಿಹಾಳ ರಸ್ತೆಯ ಬಸವಂತಪ್ಪ ಹೊಸಮನಿ ಅವರ ಹೊಲದಲ್ಲಿ ನಡೆಯಲಿದೆ. ಸುಮಾರು 16 ವರ್ಷಗಳ ನಂತರ ಹುಬ್ಬಳ್ಳಿಯಲ್ಲಿ ಶ್ರೀಗಳ ಪ್ರವಚನ ನಡೆಯುತ್ತಿದೆ.

Advertisement

ಪ್ರವಚನ ಕುರಿತಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕುಂದಗೋಳ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಮಾ. 1ರಿಂದ ಒಂದು ತಿಂಗಳವರೆಗೆ ಬೆಳಗ್ಗೆ 6:30ರಿಂದ 7:30 ಗಂಟೆವರೆಗೆ ಪ್ರವಚನ ನಡೆಯಲಿದೆ. ಸುತ್ತೂರು, ಕನೇರಿ ಸೇರಿದಂತೆ ವಿವಿಧ ಮಠಾಧೀಶರು, ತಜ್ಞರು ಪಾಲ್ಗೊಳ್ಳಲಿದ್ದಾರೆ. ಅಧ್ಯಾತ್ಮ ಚಿಂತನೆಗಳ ಜತೆಗೆ, ಕೃಷಿ, ಸಂಸ್ಕೃತಿ, ಜಾನಪದ, ಶಿಕ್ಷಣ, ಮೌಲ್ಯಗಳ ಕುರಿತಾಗಿ ಅನೇಕರು ಉಪನ್ಯಾಸ ನೀಡಲಿದ್ದಾರೆ.

ಗೋಕುಲ ಗ್ರಾಮದ ಯುವಕರು, ಗ್ರಾಮಸ್ಥರು, ಪ್ರವಚನ ಸೇವಾ ಸಮಿತಿ ಸದಸ್ಯರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಿಂದ ಸಕಾಲಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ವಾಯವ್ಯ ಸಾರಿಗೆ ಸಂಸ್ಥೆಯವರು ಒಪ್ಪಿಕೊಂಡಿದ್ದಾರೆ. ಸಂಚಾರಿ ಶೌಚಾಲಯ ಹಾಗೂ ಕಸ ಸಂಗ್ರಹ ತೊಟ್ಟಿಗಳನ್ನು ಮಹಾನಗರ ಪಾಲಿಕೆಯವರು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಗೌರವಾಧ್ಯಕ್ಷ, ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷರಾಗಿರುವ ಸೇವಾ ಸಮಿತಿ ರಚಿಸಲಾಗಿದೆ. ಅನೇಕ ಗಣ್ಯರು ಈ ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದರು.

ಸಿದ್ಧೇಶ್ವರ ಸ್ವಾಮೀಜಿಯವರು ತಾರಿಹಾಳದಲ್ಲಿನ ಶಿವಣ್ಣ ಮುದ್ದಿ ಅವರ ತೋಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರತಿದಿನ ಸಂಜೆ ಅಲ್ಲಿಯೇ ಚಿಂತನಾ ಸಭೆ ನಡೆಯಲಿದೆ. ಜತೆಗೆ ಪ್ರತಿ ಭಾನುವಾರ ಸಂಜೆ 5ರಿಂದ 6 ಗಂಟೆವರೆಗೆ ಆಂಗ್ಲಭಾಷೆಯಲ್ಲಿ ಪ್ರವಚನ ನಡೆಯಲಿದೆ. ಯುವಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ, ಅಧ್ಯಾತ್ಮ ಚಿಂತನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಶಿಬಿರಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಹು-ಧಾ ಮಹಾನಗರ ಅಷ್ಟೇ ಅಲ್ಲದೆ, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕೊಲ್ಲಾಪುರ ಇನ್ನಿತರ ಜಿಲ್ಲೆಗಳಿಂದಲೂ ಜನರು ಪ್ರವಚನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬರುವ ಭಕ್ತರಿಗೆ ಪ್ರಸಾದ ಹಾಗೂ ಅಗತ್ಯ ಇದ್ದವರಿಗೆ ವಾಸ್ತವ್ಯ ವ್ಯವಸ್ಥೆಯನ್ನು ಸಮಿತಿಯವರು ಕೈಗೊಂಡಿದ್ದಾರೆ. 5ರಿಂದ 35 ಸಾವಿರ ಜನರು ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಮಾ. 1ರಂದು ಬೆಳಗ್ಗೆ 6:30ಗಂಟೆಗೆ ಪ್ರವಚನ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಗದಗ ಶಿವಾನಂದ ಬೃಹನ್ಮಠದ ಅಭಿನವ ಶಿವಾನಂದ ಸ್ವಾಮೀಜಿ, ಹೊಸಮಠದ ಚಂದ್ರಶೇಖರ ಶಿವಯೋಗಿ ಸ್ವಾಮೀಜಿ, ಗೋಕುಲ ದಯಾನಂದ ಆಶ್ರಮದ ಚಿದ್ರೂಪಾನಂದ ಸ್ವಾಮೀಜಿ, ಮನಗುಂಡಿಯ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ, ರಾಯನಾಳದ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಹುಲ್ಯಾಳದ ಮಲ್ಲಿಕಾರ್ಜುನ ಗುರುದೇವ ತಪೋವನದ ಹರ್ಷಾನಂದ ಸ್ವಾಮೀಜಿ, ಗರಗ ಮಡಿವಾಳೇಶ್ವರ ಮಠದ ವೀರೇಶ್ವರ ದೇವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, ಕುಸುಮಾ ಶಿವಳ್ಳಿ, ಸಿ.ಎಂ. ನಿಂಬಣ್ಣವರ, ಶ್ರೀನಿವಾಸ ಮಾನೆ, ಮಾಜಿ ಸಚಿವ ವಿನಯ ಕುಲಕರ್ಣಿ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಾತ್ಮ ಪ್ರವಚನ ಸೇವಾ ಸಮಿತಿಯ ಶಂಕರಣ್ಣ ಮುನವಳ್ಳಿ, ಮಹೇಶ ದ್ಯಾವಪ್ಪನವರ, ಜಿ.ವಿ. ವಳಸಂಗ, ವಿಜಯಾನಂದ ಹೊಸಕೋಟೆ, ಅಶೋಕ ಪಾಟೀಲ, ಸುಭಾಸಸಿಂಗ್‌ ಜಮಾದಾರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next