Advertisement

ಕಂಪನಿ ಷೇರುದಾರರು, ಸಿಬ್ಬಂದಿಗೆ ಸಿದ್ಧಾರ್ಥ್ ಪತ್ರ?

12:49 AM Jul 31, 2019 | mahesh |

ಬೆಂಗಳೂರು:‘ಆದಾಯ ತೆರಿಗೆ ಇಲಾಖೆಯ ಹಿಂದಿನ ಮಹಾನಿರ್ದೇಶಕರಿಂದ ಅತೀವ ಕಿರುಕುಳ ಹಾಗೂ ಎರಡು ಸಂದರ್ಭಗಳಲ್ಲಿ ನಮ್ಮ ಕಾಫಿ ಡೇ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದು, ಮೈಂಡ್‌ ಟ್ರೀ ಒಪ್ಪಂದ ಬ್ಲಾಕ್‌ ಮಾಡಿದ್ದು, ಸಾಲ ನೀಡಿದ್ದ ಖಾಸಗಿಯವರ ಅತಿಯಾದ ಒತ್ತಡ ನನ್ನ ಈ ಸ್ಥಿತಿಗೆ ಕಾರಣ..’

Advertisement

-ನಾಪತ್ತೆಯಾಗಿರುವ ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ಷೇರುದಾರರು ಹಾಗೂ ಸಿಬ್ಬಂದಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖೀಸಿರುವ ಸಾಲುಗಳಿವು.

ಆರು ತಿಂಗಳ ಹಿಂದೆ ಸೇಹಿತರೊಬ್ಬರಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದೆ. ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟೆ. ಆದರೆ, ಪರಿಸ್ಥಿತಿ ಕೈ ಮೀರಿ ಹೋಯಿತು. ಇದಕ್ಕೆಲ್ಲಾ ನಾನೊಬ್ಬನೇ ಹೊಣೆ. ಸಂಸ್ಥೆಯ ಆಸ್ತಿ-ಪಾಸ್ತಿಯ ಮೌಲ್ಯ ಕಂಪನಿ ಮೇಲಿರುವ ಸಾಲದ ಮೊತ್ತಕ್ಕಿಂತ ಜಾಸ್ತಿ. ಹೀಗಾಗಿ, ಪ್ರತಿಯೊಂದು ಬಾಕಿಯನ್ನೂ ಪಾವತಿಸಬಹುದು ಎಂದು ಹೇಳಿದ್ದಾರೆ. ಆದರೆ, ಪತ್ರದಲ್ಲಿ ಸಿದ್ಧಾರ್ಥ್ ಅವರ ಸಹಿ ತಾಳೆಯಾಗುತ್ತಿಲ್ಲ. ಇದು ನಕಲಿ ಸಹಿ ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

ಪತ್ರದ ಸಾರಾಂಶ: 37 ವರ್ಷಗಳ ಕಾಲ ಅತ್ಯಂತ ಪರಿಶ್ರಮದಿಂದ ರಾಜ್ಯಾದ್ಯಂತ ಕೆಫೆ ಕಾಫಿ ಡೇ ಆರಂಭಿಸಿ 30 ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಿದ್ದೇನೆ. ನಾನು ಷೇರು ಹೂಡಿಕೆ ಮಾಡಿರುವ ಐಟಿ ಕಂಪನಿಯಲ್ಲಿ 20 ಸಾವಿರ ಉದ್ಯೋಗ ಕಲ್ಪಿಸಿದ್ದೇನೆ.

ಸಂಸ್ಥೆಯನ್ನು ಅಪಾರ ಪರಿಶ್ರಮದಿಂದ ನಾನು ಮುನ್ನಡೆಸಿ ಬೆಳೆಸಿದೆ. ಆದರೆ, ಇತ್ತೀಚಿನ ಸನ್ನಿವೇಶಗಳು ನನ್ನ ಉದ್ಯಮ ಕುಸಿತಗೊಳ್ಳಲು ಕಾರಣವಾಗಿದೆ. ಇದನ್ನು ಪುನಶ್ಚೇತನಗೊಳಿಸಲು ನಾನು ನಡೆಸಿದ್ದ ಸತತ ಪ್ರಯತ್ನಗಳು ವಿಫ‌ಲವಾಗಿದ್ದು, ಉದ್ಯಮ ಲಾಭದಾಯಕವಾಗಿ ಮುನ್ನಡೆಯುವ ಲಕ್ಷಣಗಳು ಗೋಚರಿಸದಿರುವ ಬಗ್ಗೆ ನನಗೆ ಬೇಸರವಾಗಿದೆ. ನಮ್ಮ ಕಂಪನಿಯ ಷೇರು ಖರೀದಿಸಿದ್ದವರು ವಾಪಸ್‌ ಖರೀದಿ ಮಾಡುವಂತೆ ನನ್ನ ಮೇಲೆ ಅತೀವ ಒತ್ತಡ ಹೇರಿದ್ದರು. ಇದಕ್ಕಾಗಿ ಸ್ನೇಹಿತನ ಬಳಿ ದೊಡ್ಡ ಮೊತ್ತ ಪಡೆದು ಆ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿದ್ದೆ.

Advertisement

ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯ ತನಿಖೆಯಿಂದ ತೀವ್ರ ಕಿರುಕುಳ ಎದುರಿಸಬೇಕಾಯಿತು. ಸಂಸ್ಥೆಗೆ ಸೇರಿದ ಕೆಲವು ಸ್ವತ್ತುಗಳು ಮತ್ತು ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ಆದಾಯ ತೆರಿಗೆ ಇಲಾಖೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮಹಾನಿರ್ದೇಶಕರು ವಿಪರೀತ ಕಿರುಕುಳ ನೀಡಿದ್ದಾರೆ. ಸಾಲ ನೀಡಿದ್ದವರ ಒತ್ತಡವನ್ನೂ ಸಹಿಸಲಾಗಲಿಲ್ಲ.

ನಾನು ತಮ್ಮಲ್ಲಿ (ಕೆಫೆ ಕಾಫಿ ಡೇ ನಿರ್ದೇಶಕರುಗಳು ಮತ್ತು ಸಿಬ್ಬಂದಿಗೆ) ಕಳಕಳಿಯಿಂದ ಮನವಿ ಮಾಡಿಕೊಳ್ಳುವುದೇನೆಂದರೆ, ಈ ಉದ್ಯಮ ನಡೆಸಲು ನನ್ನಿಂದ ಸಾಧ್ಯವಿಲ್ಲ. ಆದ್ದರಿಂದ ಸಮರ್ಥರಾಗಿರುವ ನೀವು ಹೊಸ ಆಡಳಿತ ವ್ಯವಸ್ಥೆಯೊಂದಿಗೆ ಈ ಉದ್ಯಮವನ್ನು ಮುನ್ನಡೆಸಬೇಕು ಎಂದು ಕೋರುತ್ತಿದ್ದೇನೆ.

ಈಗ ಆಗಿರುವ ಎಲ್ಲ ತಪ್ಪುಗಳು ಮತ್ತು ಲೋಪಗಳಿಗೆ ಏಕೈಕ ಕಾರಣ ನಾನೇ. ಹಣಕಾಸು ದುಃಸ್ಥಿತಿಗಳಿಗೆ ನಾನೇ ಹೊಣೆಗಾರ ನಾಗಿದ್ದೇನೆ. ನನ್ನ ತಂಡ, ಲೆಕ್ಕ ಪರಿಶೋಧಕರು, ಕುಟುಂಬ ಮತ್ತು ಆಡಳಿತ ಮಂಡಳಿಯ ಹಿರಿಯ ಸದಸ್ಯರುಗಳಿಗೆ ನನ್ನ ವ್ಯವಹಾರ, ವಹಿವಾಟಿನ ಬಗ್ಗೆ ಏನೂ ತಿಳಿದಿಲ್ಲ.

ಯಾರಿಗೂ ಮೋಸ, ದ್ರೋಹ ಅಥವಾ ವಂಚನೆ ಮಾಡುವುದು ಖಂಡಿತ ನನ್ನ ಉದ್ದೇಶವಲ್ಲ. ನಾನು ನನ್ನ ಈ ಪತ್ರದೊಂದಿಗೆ ಪ್ರತಿಯೊಂದು ಸ್ವತ್ತು-ಆಸ್ತಿಯ ಎಲ್ಲ ಪಟ್ಟಿಗಳು ಮತ್ತು ಅದರ ಮೌಲ್ಯಗಳ ವಿವರಗಳನ್ನು ಲಗತ್ತಿಸಿದ್ದೇನೆ. ಈ ಕೆಳಗೆ ನಾನು ನಮೂದಿಸಿರುವ ನಮ್ಮ ಸ್ವತ್ತುಗಳ ಮೌಲ್ಯವು ನಾನು ಈಗ ಹೊಣೆಗಾರನಾಗಬೇಕಿರುವ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಹೀಗಾಗಿ, ಪ್ರತಿಯೊಂದು ಬಾಕಿ ಮತ್ತು ಪಾವತಿಸಬೇಕಾಗಿರುವ ಮೊತ್ತಗಳನ್ನು ಮರು ಪಾವತಿಸಲು ಸಹ ಇದು ಸಹಕಾರಿಯಾಗುತ್ತದೆ.

ತಾಳೆಯಾಗುತ್ತಿಲ್ಲ ಸಹಿ
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಿದ್ಧಾರ್ಥ ಬರೆದಿದ್ದಾರೆ ಎಂದು ಹೇಳಲಾಗಿ ರುವ ಪತ್ರದಲ್ಲಿನ ಸಹಿ ಮತ್ತು ಕಂಪನಿಯ ವಾರ್ಷಿಕ ವರದಿಯಲ್ಲಿರುವ ಸಹಿಗೂ ತಾಳೆಯಾಗುತ್ತಿಲ್ಲ ಎಂದು ತೆರಿಗೆ ಇಲಾಖೆ ಮೂಲಗಳು ಹೇಳಿವೆ

Advertisement

Udayavani is now on Telegram. Click here to join our channel and stay updated with the latest news.

Next