Advertisement

ನೀರಿಗೆ ಬಿದ್ದು ಉಸಿರುಗಟ್ಟಿ ಸಿದ್ದಾರ್ಥ ಸಾವು; ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ

09:17 AM Aug 04, 2019 | Sriram |

ಮಂಗಳೂರು: ಕೆಫೆ ಕಾಫಿ ಡೇ ಸ್ಥಾಪಕ ಹಾಗೂ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ವಿ.ಜಿ. ಅವರು ಅವರು ನೀರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅವರ ಮೃತ ದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ (ಪ್ರೊವಿಷನಲ್‌ ರಿಪೋರ್ಟ್‌) ಹೇಳಿದೆ.

Advertisement

ಪ್ರಾಥಮಿಕ ವರದಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ| ರಾಜೇಶ್ವರಿ ದೇವಿ ಅವರು ಪ್ರಕರಣದ ತನಿಖಾಧಿಕಾರಿ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ ಅವರಿಗೆ ಶುಕ್ರವಾರ ಸಲ್ಲಿಸಿದ್ದಾರೆ.

ಗೌಪ್ಯವಾಗಿರುವ ಈ ವರದಿಯಲ್ಲಿ ಸಿದ್ಧಾರ್ಥ್ ಅವರ ಸಾವಿಗೆ ಬೇರೆ ಯಾವುದೇ ಕಾರಣವನ್ನು ಉಲ್ಲೇಖೀಸಿಲ್ಲ. ನೀರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ನಮೂದಿಸಲಾಗಿದೆ. ಬಾಕಿ ಉಳಿದಂತೆ ಸಾವಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಅಂತಿಮ ವರದಿಯಲ್ಲಿ ಉಲ್ಲೇಖೀಸಲಾಗುವುದು ಎಂದಷ್ಟೇ ತಿಳಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಸಿದ್ಧಾರ್ಥ್ ವಿ.ಜಿ. ಅವರು ಜು. 29 ರಂದು ಸಂಜೆ ವೇಳೆಗೆ ಉಳ್ಳಾಲ ಸೇತುವೆ ಬಳಿ ನಾಪತ್ತೆಯಾಗಿದ್ದರು. ಬಳಿಕ ಜು. 31 ರಂದು ಬೆಳಗ್ಗೆ ಅವರ ಮೃತದೇಹ ಸೇತುವೆಯಿಂದ ಸುಮಾರು 4.5 ಕಿ.ಮೀ ದೂರದ ಹೊಯ್ಗೆ ಬಜಾರ್‌ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ಸಿದ್ಧಾರ್ಥ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಜು. 31 ರಂದು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಫೂರೆನ್ಸಿಕ್‌ ತಜ್ಞ ಡಾ| ಪ್ರತೀಕ್‌ ರಸ್ತೋಗಿ ಮತ್ತು ವೆನ್ಲಾಕ್ಆಸ್ಪತ್ರೆಯ ಫೂರೆನ್ಸಿಕ್‌ ವಿಭಾಗದ ಡಾ| ರಶ್ಮಿ ಅವರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು.

Advertisement

ಸಿದ್ಧಾರ್ಥ್ ನಿಗೂಢ ಸಾವಿನ ಬಗ್ಗೆ ಊಹಾಪೋಹಗಳು ಹಾಗೂ ಅನೇಕ ಸಂಶಯಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಮೃತದೇಹದ ಭಾಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಇದೀಗ ಶುಕ್ರವಾರ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬಂದಿದೆ. ವೆನ್ಲಾಕ್ಆ ಸ್ಪತ್ರೆಯ ಅಧೀಕ್ಷಕರು ಈ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ. ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಸಿದ್ಧಾರ್ಥ್ ಸಾವಿಗೆ ನೈಜ ಕಾರಣವೇನು ಎಂಬುದರ ಯಾವುದೇ ಉಲ್ಲೇಖ ಇಲ್ಲ ಎಂದು ಪೊಲೀಸ್‌ ಮೂಲಗಳು ವಿವರಿಸಿವೆ.

ದಾವಣಗೆರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಅಂತಿಮ ಹಂತದ ವರದಿ ಸಿದ್ಧಗೊಳ್ಳಲಿದೆ. ಆ ಬಳಿಕವೇ ಆತ್ಮಹತ್ಯೆಗೆ ಕಾರಣ ಕುರಿತಂತೆ ಅಂತಿಮ ವರದಿಯಲ್ಲಿ ತಿಳಿಸಲಾಗುವುದು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಅವರ ಸಾವಿಗೆ ಬೇರೆ ಕಾರಣಗಳೇನಾದರೂ ಇವೆಯೇ ಎಂಬ ಬಗ್ಗೆ ಸಂಶಯಗಳು ಮತ್ತು ಊಹಾಪೋಹಗಳು ಹುಟ್ಟಿಕೊಂಡಿವೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹೆಚ್ಚಿನ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆ ಆಸ್ಪತ್ರೆ ವೈದ್ಯರನ್ನು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಫೂರೆನ್ಸಿಕ್‌ ತಜ್ಞರು ಸಿದ್ಧಾರ್ಥ್ ಮೃತ ದೇಹದ ವಿವಿಧ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ವಿಧಿ ವಿಜ್ಞಾನ ಪರೀಕೆಯಷಯ ವರದಿ ಬರಲು ಸುಮಾರು 10 ದಿನಗಳು ಬೇಕಾಗ ಬಹುದು ಎಂದು ಮೂಲಗಳು ವಿವರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next