ಬೆಳ್ತಂಗಡಿ: ಡಾ| ಶಿವಕುಮಾರ ಸ್ವಾಮೀಜಿ ಅವರಿಗೂ ಧರ್ಮಸ್ಥಳ ಕ್ಷೇತ್ರಕ್ಕೂ ವಿಶೇಷ ನಂಟು. ಹಲವು ದಶಕಗಳ ಹಿಂದೆಯೇ ಶ್ರೀಗಳು ಧರ್ಮಸ್ಥಳದ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕೂಡ ಸಾಕಷ್ಟು ಬಾರಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆ, ರತ್ನವರ್ಮ ಹೆಗ್ಗಡೆ ಅವರ ಜತೆಗೂ ಶ್ರೀಗಳು ಉತ್ತಮ ಬಾಂಧವ್ಯ ಹೊಂದಿದ್ದರು. 60ರ ದಶಕದಲ್ಲಿ ಸಿದ್ಧಗಂಗಾ ಶ್ರೀಗಳು ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಕ್ಕೆ ಆಗಮಿಸಿ ಭಾಷಣ ಮಾಡಿ ಕ್ಷೇತ್ರದ ಗೌರವ ಸ್ವೀಕರಿಸಿದ್ದರು.
1969 ಹಾಗೂ 71ರಲ್ಲಿ ಶ್ರೀಗಳ ಉಜಿರೆ ಎಸ್‌ಡಿಎಂ ಕಾಲೇಜಿನ ಕಟ್ಟಡದ ಶಿಲಾನ್ಯಾಸ ಹಾಗೂ ಉದ್ಘಾಟನ ಸಮಾರಂಭದಲ್ಲೂ ಪಾಲ್ಗೊಂಡಿದ್ದರು. ಎಸ್‌ಡಿಎಂ ಕಾಲೇಜಿನ 25ನೇ ವರ್ಷಾಚರಣೆ ಸಂದರ್ಭ ಧರ್ಮಾಧಿಕಾರಿಗಳ ಬೀಡು ಹಾಗೂ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಕ್ಷೇತ್ರದ ಜನಪರ ಕಾಳಜಿಯ ಕುರಿತು ವಿಶೇಷ ಗೌರವ ಹೊಂದಿದ್ದರು.
ಧರ್ಮಾಧಿಕಾರಿಯವರು 2018ರ ಮಾರ್ಚ್‌ನಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಹೆಗ್ಗಡೆ ಅವರು 50 ವರ್ಷಗಳಿಂದ ಶ್ರೀಗಳನ್ನು ನಿಕಟವಾಗಿ ಬಲ್ಲವರಾಗಿದ್ದು, ಅವರ ಸಮಾಜಮುಖೀ ಕಾರ್ಯಗಳು ನನಗೂ ಪ್ರೇರಣೆ ನೀಡಿದೆ ಎಂದು ಹೇಳುತ್ತಾರೆ.
ಶ್ರೀಗಳಿಗೆ ಉತ್ತಮ ಹಾಸ್ಯ ಪ್ರಜ್ಞೆ ಇದ್ದು, ಇಳಿವಯಸ್ಸಿನಲ್ಲೂ ಅವರ ಜ್ಞಾನ ಸಂಪತ್ತು ವಿಶೇಷವಾಗಿದ್ದು, ಭೇಟಿ ಮಾಡಿದ ಸಂದರ್ಭದಲ್ಲಿ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಹಾಗೂ ಸಮಾಜ ಸೇವಾ ಕಾರ್ಯಗಳ ಕುರಿತು ವಿಚಾರಿಸುತ್ತಿದ್ದರು ಎಂದು ಡಾ| ಹೆಗ್ಗಡೆ ಅವರು ಧರ್ಮಸ್ಥಳಕ್ಕೂ ಶ್ರೀಗಳಿಗೂ ಇದ್ದ ಅವಿನಾಭಾವ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.