Advertisement
ಜ್ಞಾನಯೋಗಾಶ್ರಮ ಮಠದ ಅಧ್ಯಕ್ಷರಾದ ಬಸವಲಿಂಗಯ್ಯ ಸ್ವಾಮೀಜಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಶ್ರೀಗಳ ಇಚ್ಚೆಯಂತೆ ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಅಂತ್ಯಕ್ರಿಯೆ ನೆರವೇರಿತು .
Related Articles
Advertisement
ಇದನ್ನೂ ಓದಿ: ಸರ್ಕಸ್ ಪ್ರದರ್ಶನದ ವೇಳೆ ತರಬೇತುದಾರನ ಮೇಲೆಯೇ ದಾಳಿ ಮಾಡಿದ ಹುಲಿ… ವಿಡಿಯೋ ವೈರಲ್
ಅಂತ್ಯಕ್ರಿಯೆಗೆ ಬಾಗಲಕೋಟೆಯ ಶ್ರೀಗಂಧ, ಬಬಲೇಶ್ವರ ಭಕ್ತೆಯ ಬೆರಣಿ, ತುಪ್ಪ ಬಳಕೆ
ಸಿದ್ಧೇಶ್ವರ ಶ್ರೀಗಳ ಆಶಯದಂತೆ ಅವರ ಪಾರ್ಥಿವ ಶರೀರವನ್ನು ಹೂಳದೇ ಅಗ್ನಿಗೆ ಅರ್ಪಣೆ ಮಾಡಲಾಯಿತು. ಇದಕ್ಕಾಗಿ ಬಾಗಲಕೋಟೆಯಿಂದ ಶ್ರೀಗಂಧದ ಕಟ್ಟಿಗೆ ಹಾಗೂ ಬಬಲೇಶ್ವರದ ಭಕ್ತೆ ತಂದಿದ್ದ ದೇಶಿ ಗೋವಿನ ತುಪ್ಪ, ಬೆರಣಿ ಬಳಸಲಾಯಿತು. ಬಾಗಲಕೋಟೆಯ ಹಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ತಮ್ಮ ಆಶ್ರಮದಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳ ಕಟ್ಟಿಗೆಯನ್ನು ಶ್ರೀಗಳ ಅಂತ್ಯಸಂಸ್ಕಾರಕ್ಕೆ ಜ್ಞಾನಯೋಗಾಶ್ರಮಕ್ಕೆ ತಂದಿದ್ದರು. ಇನ್ನು ಶ್ರೀಗಳ ಚಿತಾಸ್ಪರ್ಶದ ಮಾಹಿತಿ ತಿಳಿಯುತ್ತಲೇ ದೇಶಿ ಗೋ ಸಂರಕ್ಷಕ ಕುಟುಂಬವಾದ ಶಿರಮಗೊಂಡ ಲಕ್ಷ್ಮೀ ಹಾಗೂ ಬಸಗೊಂಡ ದಂಪತಿ ಸ್ವತಃ ತಾವೇ ತಯಾರಿಸಿದ ಎರಡು ಚೀಲ ಬೆರಣಿ ತಂದಿದ್ದರು. ಅಲ್ಲದೇ, ಸೋಮವಾರ ಹೆಪ್ಪು ಹಾಕಿದ ಹಾಲಿನಿಂದ ಮಂಗಳವಾರ ಬೆಳಗ್ಗೆ ಲಭ್ಯವಾದ ಬೆಣ್ಣೆಯಿಂದ ದೊರೆತ 200 ಗ್ರಾಂ ತುಪ್ಪವನ್ನು ಶ್ರೀಗಳ ಅಂತಿಮ ಸಂಸ್ಕಾರಕ್ಕಾಗಿ ಅರ್ಪಿಸಿದರು.
ಗಣ್ಯರ ನುಡಿ ನಮನಸ್ವಾಮಿ ವಿವೇಕಾನಂದರ ನಂತರ ದೇಶದಲ್ಲಿ ಬಹುದೊಡ್ಡ ಪ್ರೇರಕ ಶಕ್ತಿಯಾಗಿ ತಮ್ಮ ಮಾತುಗಳಿಂದ ಜನರನ್ನು ಆಕರ್ಷಿಸುವ ಶಕ್ತಿ ಸಿದ್ಧೇಶ್ವರ ಶ್ರೀಗಳಿಗೆ ಮಾತ್ರವೇ ಇತ್ತು. ಅಂಥ ಮಹಾನ್ ಜ್ಞಾನಿ ಸಂತನನ್ನು ಕಳೆದುಕೊಂಡು ನಾಡು ಬಡವಾಗಿದೆ. ಭಾರತದ ಧಾರ್ಮಿಕ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ನಿರ್ಮೋಹಿ ಶ್ರೇಷ್ಠಸಂತ. ಶಿವಾನಂದ ಪರಂಪರೆಯ ಮಲ್ಲಿಕಾರ್ಜುನ ಶ್ರೀಗಳ ಶಿಷ್ಯರಾದರೂ ಪರಂಪರೆಯನ್ನು ಮೀರಿ ಧಾರ್ಮಿಕ ನೆಲೆಯಲ್ಲೇ ಶ್ರೇಷ್ಠತೆಯಿಂದ ಸಮಾಜ ಸುಧಾರಿಸಿದರು. ಸಾವು ಮೀರಿದ, ಜಯಿಸಿದ ಸಿದ್ಧೇಶ್ವರರು. ಪ್ರಕೃತಿ ಇರುವವರೆಗೂ ಸೃಷ್ಟಿಯೊಂದಿಗೆ ಜೀವಂತವಾಗಿರುತ್ತಾರೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ನುಡಿದಂತೆ ನಡೆದ ಸರಳತೆಯ ಸಂತರಾಗಿದ್ದ ಸಿದ್ಧೇಶ್ವರ ಶ್ರೀಗಳು ಶಿವಮೊಗ್ಗಕ್ಕೆ ಬಂದಿದ್ದಾಗ ನಮ್ಮ ಮನೆಗೆ ಬಂದಿದ್ದರು. ಅದು ನನ್ನ ಜೀವನದ ಸೌಭಾಗ್ಯವಾಗಿತ್ತು. ವಿಜಯಪುರದ ಸ್ವಾಮಿ ವಿವೇಕಾನಂದರೇ ಆಗಿದ್ದ ಶ್ರೀಗಳು, ದೈಹಿಕವಾಗಿ ಅಗಲಿದ್ದರೂ ಅವರು ಆದರ್ಶದ ಜೀವನ ನಮ್ಮ ಮಧ್ಯೆ ಸದಾ ಜೀವಂತವಾಗಿರಲಿದೆ.
– ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕೇವಲ ತಮ್ಮ ನಡೆ, ನುಡಿಗಳಿಂದಲೇ ಜಗತ್ತಿನ ಆಕರ್ಷಣೆಯಾಗಿದ್ದ ಸಿದ್ಧೇಶ್ವರರು ಕೋಟ್ಯಂತರ ಭಕ್ತರ ಹೃದಯ ಗೆದ್ದ ಬಹು ದೊಡ್ಡ ಸಂತ ಎನಿಸಿದ್ದರು. ದೇಶದ ಸಂತರಲ್ಲಿ ಶ್ರೇಷ್ಠತೆಯನ್ನು ಪಡೆದಿದ್ದ ಶ್ರೀಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳದೇ ನಮ್ಮನ್ನು ಅಗಲಿರುವುದು ನೋವಿನ ಸಂಗತಿ.
– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ ಶ್ರೀ ಸಿದ್ಧೇಶ್ವರಸ್ವಾಮಿಗಳು ಯಾವ ಲೌಕಿಕ ವಿಶೇಷಣಗಳಿಗೂ ನಿಲುಕುವಂಥವರಲ್ಲ. ಅವರನ್ನು ಜನತೆ ನಡೆದಾಡುವ ದೇವರು ಎಂದು ಪ್ರೀತ್ಯಾದರಗಳಿಂದ ಗೌರವಿಸುತ್ತಿದ್ದರು. ನಿಜವಾದ ಅರ್ಥದಲ್ಲಿ ಅವರೊಬ್ಬರು ಅವಧೂತರು. ವೇದಾಂತಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳವರಿಂದ ಅಧ್ಯಾತ್ಮದೀಕ್ಷೆ ಪಡೆದು, ಸಕಲಶಾಸ್ತ್ರ ವಿಶಾರದರಾದ ಅವರು ಪುರಾಣಕಾಲದ ಋಷಿಸದೃಶ್ಯ ವ್ಯಕ್ತಿತ್ವ ಹೊಂದಿದ್ದ ಜ್ಞಾನನಿಧಿಗಳು.
-ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಿದ್ದೇಶ್ವರ ಅಪ್ಪಾಜಿ ಈ ಶತಮಾನದ ವ್ಯಕ್ತಿಗಳು. ಯುಗ ಪುರುಷರು, ಅವರಿಗೆ ಯಾವುದೇ ಪಂಥಗಳು ಇರಲಿಲ್ಲ. ಯಾವುದೇ ಗ್ರಂಥಗಳಿಗೆ ಅಂಟಿಕೊಂಡಿರಲಿಲ್ಲ. ಆದರೆ ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ. ಅವರು ಸುಳಿದಲ್ಲೆಲ್ಲಾ ಸೂಯಿದಾನ, ಸಮಾಧಾನಗಳು. ಅವರು ನಿಂತ ನಿಲುವು ಅದು ಸತ್ಯದ ಒಲವು. ಅವರು ಮಾಯ ಮುಟ್ಟದ ಕಾಯ, ಭ್ರಮೆಯಿಲ್ಲದ ಭಾವ, ಲೋಕವನ್ನು ಪ್ರೀತಿಸಿ, ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು.
– ಗವಿಸಿದ್ದೇಶ್ವರ ಮಹಾಸ್ವಾಮೀಜಿ, ಕೊಪ್ಪಳ ಕೃಷಿ-ಋಷಿ ಪರಂಪರೆಯನ್ನು ಸಮನ್ವಯಗೊಳಿಸಿದ ಅನಘÂì ಸಂತ. ಸಿದ್ಧೇಶ್ವರ ಶ್ರೀಗಳ ಜೀವನವೇ ಶ್ರೇಷ್ಠ ಮಾದರಿ ಮಾರ್ಗ. ಓರ್ವ ಸಂತ ಹೇಗಿರಬೇಕು ಎಂಬುದಕ್ಕೆ ಅವರೊಬ್ಬರೇ ಮಾದರಿ.
– ನಿಜಗುಣಾನಂದ ಶ್ರೀ, ಬೈಲೂರು ದೇವರನ್ನ ಕಳೆದುಕೊಂಡಿದ್ದೇನೆ. ಜ್ಞಾನ ನೀಡುವ ಧ್ವನಿ ನಿಂತು ಹೋಗಿರುವುದು ನೋವು ತರಿಸಿದೆ. ನಾಡಿಗೆ ಕೀರ್ತಿ ತಂದಿದ್ದ ನಡೆದಾಡುವ ದೇವರೊಂದಿಗೆ ನನಗೆ 25 ವರ್ಷಗಳಿಂದ ಒಡನಾಟವಿತ್ತು. ಜ್ಞಾನಯೋಗಾಶ್ರಮದೊಂದಿಗೆ ನನಗಿದ್ದ ನಂಟು, ಶ್ರೀಗಳಿಂದ ನನಗೆ ಸಿಗುತ್ತಿದ್ದ ಮಾರ್ಗದರ್ಶನ ಅವರ್ಣನೀಯ.
– ಶ್ರೀರಾಮುಲು, ಸಾರಿಗೆ ಸಚಿವ ಸಿದ್ಧೇಶ್ವರ ಶ್ರೀಗಳು ತಮ್ಮ ಜ್ಞಾನ ದಾಸೋಹದ ಮೂಲಕ ಅಸಂಖ್ಯ ವಿವೇಕಾನಂದರನ್ನು ರೂಪಿಸಿದ್ದರು. ಮುಂದಿನ ಪೀಳಿಗೆಗೆ ಶ್ರೀಗಳ ಆದರ್ಶಗಳನ್ನು ಕೊಂಡೊಯ್ಯಲು ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ವ್ಯವಸ್ಥೆ ಮಾಡಬೇಕು. ಶಾಲಾ ಮಕ್ಕಳ ಪಠ್ಯದಲ್ಲೂ ಅಳವಡಿಸಬೇಕು.
– ಪ್ರಮೋದ ಮುತಾಲಿಕ್, ಮುಖ್ಯಸ್ಥರು, ಶ್ರೀರಾಮ ಸೇನೆ