Advertisement

ಸಿದ್ದೇಶ್ವರ ಶ್ರೀ ಲಿಂಗೈಕ್ಯ : ಶ್ರೀಗಳ ಅಂತಿಮ ದರ್ಶನಕ್ಕೆ ಮಾರ್ಗಸೂಚಿ ಬಿಡುಗಡೆ

11:59 PM Jan 02, 2023 | Team Udayavani |

ವಿಜಯಪುರ : ನಡೆದಾಡುವ ದೇವರೆಂದೆ ಖ್ಯಾತರಾದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜೀಗಳು ಸೋಮವಾರದಂದು ಲಿಂಗೈಕ್ಯರಾಗಿದ್ದಾರೆ. ರಾಜ್ಯ ಸರ್ಕಾರ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಪೂಜ್ಯರ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ನಿರ್ದೇಶಿರುತ್ತದೆ.

Advertisement

ಅಲ್ಲದೇ ಶ್ರೀಗಳ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ಸರ್ಕಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಜಿಲ್ಲಾಡಳಿತವು ಪೂಜ್ಯರ ಪಾರ್ಥಿವ ಶರೀರವನ್ನು ಶ್ರೀ ಜ್ಞಾನಯೋಗಾಶ್ರಮದಲ್ಲಿ ಈ ರಾತ್ರಿಯಿಂದ ನಾಳೆ ಬೆಳಗ್ಗೆ 4.30ರವರೆಗೆ ಭಕ್ತಾದಿಗಳ ದರ್ಶನಕ್ಕಾಗಿ ಇಡಲಾಗುವುದು. ನಂತರ ಪೂಜ್ಯರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಶ್ರೀ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಕ್ತಾದಿಗಳಿಗೆ ಶ್ರೀಗಳ ಅಂತಿಮ ದರ್ಶನವನ್ನು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.

ಅಂತಿಮ ದರ್ಶನಕ್ಕಾಗಿ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿಯಿಂದ ಆಗಮಿಸುವ ಭಕ್ತಾದಿಗಳು ನೇರವಾಗಿ ವಿಜಯಪುರ ನಗರದ ರಿಂಗ್ ರೋಡ್ ಮೂಲಕ (ಇಟಗಿ ಪೆಟ್ರೋಲ್ ಪಂಪ್) ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಪ್ರಸಾದ, ನೀರು, ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ.

Advertisement

ಭಕ್ತಾದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಶ್ಚಂದ್ರ ಬೋಸ್ ರಸ್ತೆಯ ಮೂಲಕ ನಡೆದುಕೊಂಡು ಸೈನಿಕ ಶಾಲೆಯ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು.

ದರ್ಶನದ ನಂತರ ಸೈನಿಕ ಶಾಲೆಯ 2ನೇ ಗೇಟ್ ಮೂಲಕ (ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ ದ್ವಾರ) ಹೊರಗಡೆ ಬಂದು ತಮ್ಮ ವಾಹನ ಮೂಲಕ ವಾಪಸ ತೆರಳಬೇಕು. ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಸರ್ಕಾರದಿಂದ ಸಕಲ ಗೌರವಗಳೊಂದಿಗೆ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂಜೆ 4 ಗಂಟೆಯಿಂದ ಪುನಃ ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸೈನಿಕ ಶಾಲೆಯಿಂದ ಶ್ರೀ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. (ಮಾರ್ಗ: ಗೋದಾವರಿ-ಶ್ರೀ ಶಂಕರಲಿಂಗ ದೇವಸ್ಥಾನ-ಶಿವಾಜಿವೃತ್ತ – ಗಾಂಧಿವೃತ್ತ- ಶ್ರೀ ಸಿದ್ದೇಶ್ವರ ದೇವಸ್ಥಾನ-ಬಿ.ಎಲ್.ಡಿ.ಇ. ಆಸ್ಪತ್ರೆ-ಶ್ರೀ ಜ್ಞಾನಯೋಗಾಶ್ರಮ), ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡು ಪೂಜ್ಯರ ಪಾರ್ಥೀವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಸಬಹುದಾಗಿದೆ.

ಪೂಜ್ಯರ ಅಂತಿಮ ಕ್ರಿಯೆಯನ್ನು ಸಂಜೆ 5 ಗಂಟೆಗೆ ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ಸ್ಥಳಾವಕಾಶದ ಅಭಾವವಿರುವುದರಿಂದ ಭಕ್ತಾದಿಗಳು ಸೈನಿಕ ಶಾಲೆಯಲ್ಲಿಯೇ ಅಂತಿಮ ದರ್ಶನ ಪಡೆಯಲು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು, ಭಕ್ತಾದಿಗಳು ಯಾವುದೇ ಆತಂತಕ್ಕೆ ಒಳಗಾಗದೇ ಶಾಂತ ರೀತಿಯಿಂದ ವರ್ತಿಸಿ, ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next