ಬಾಗಲಕೋಟೆ: ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಜ. 14ರಿಂದ 16ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಡಾ| ಶಿವಕುಮಾರ ಸ್ವಾಮೀಜಿ ಮತ್ತು ಹುನಗುಂದ ತಾಲೂಕು ಕಸಾಪ ಅಧ್ಯಕ್ಷ ಅಧ್ಯಕ್ಷ ಮಹಾಂತೇಶ ಹಳ್ಳೂರ ಹೇಳಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಳೇಭಾವಿಯ ಪಿ.ದಿಕ್ಷಿತ್ ಫೌಂಡೇಶನ್, ಗಜೇಂದ್ರಗಡದ ಎಸ್.ಎಸ್.ಕೆ ಸಮಾಜ ಮತ್ತು ಸಿದ್ದಶ್ರೀ ಗ್ರಾಮೀಣಾಭಿವೃದ್ದಿ ಮತ್ತು ಸಮಾಜ ಸೇವಾಶ್ರಮ ಆಶ್ರಯದಲ್ಲಿ ಜಾತ್ರೋತ್ಸವ, ಚಲನಚಿತ್ರೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಲೋಕಕಲ್ಯಾಣಕ್ಕಾಗಿ ಜೀವಂತ ಸಮಾಧಿಯಾಗಿರುವ ಸಿದ್ದನಕೊಳ್ಳದ ಪವಾಡ ಪುರುಷ ಸಿದ್ದಪ್ಪಜ್ಜನವರ ಗದ್ದುಗೆಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ಮೂರು ದಿನಗಳ ಕಾಲ ಜರುಗಲಿವೆ. ಜ. 14ರಂದು ಸಂಜೆ 6 ಗಂಟೆಗೆ ಸಿದ್ದಶ್ರೀ ಸಾಂಸ್ಕೃತಿಕ ಉತ್ಸವ ಜರುಗಲಿದ್ದು, ಗುಳೇದಗುಡ್ಡ ಮರಡಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಮುರನಾಳ ಮಳಿಯಪ್ಪಜ್ಜ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕರಾದ ಗೌರಮ್ಮ ಕಾಶಪ್ಪನವರ, ವಿಜಯಾನಂದ ಕಾಶಪ್ಪನವರ ಭಾಗವಹಿಸಲಿದ್ದಾರೆ. ಬಾಲಿವುಡ್ ಹಿನ್ನೆಲೆ ಗಾಯಕಿ ಮಧುಶ್ರೀ ಅವರಿಗೆ ರಾಷ್ಟ್ರೀಯ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.15ರಂದು ಸಂಜೆ 6ಗಂಟೆಗೆ ಚಲನಚಿತ್ರೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಜರುಗಲಿದೆ.
ಮೈಸೂರಿನ ವಿಜಯ ಮಹಾಂತ ಸ್ವಾಮೀಜಿ, ಚಳಗೇರಿಯ ವೀರಸಂಗಮೇಶ್ವರ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಶಿವಾಚಾರ್ಯಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಹನುಮಂತನಿರಾಣಿ, ರೋಣ ಶಾಸಕ ಕಳಕಪ್ಪ ಬಂಡಿ, ಸಂಸದ ಪಿ.ಸಿ.ಗದ್ದಿಗೌಡರ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 16ರಂದು ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.