Advertisement

ತನ್ನ ಊರಿನ ಸಮಸ್ಯೆ ಹೇಳಲು ಬಂದ ಗ್ರಾ.ಪಂ.ಸದಸ್ಯನನ್ನು ವೇದಿಕೆಯಿಂದ ಕೆಳಗಿಳಿಸಿದ ಸಿದ್ದರಾಮಯ್ಯ

05:56 PM Jan 04, 2021 | Team Udayavani |

ಬಾಗಲಕೋಟೆ : ಪ್ರಸ್ತುತ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ತಮ್ಮ ಪಕ್ಷದ ಬೆಂಬಲಿತ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದ ವೇಳೆ ನೂತನ ಸದಸ್ಯರೊಬ್ಬರು ತಮ್ಮೂರಿನ ಸಮಸ್ಯೆ ಹೇಳಿಕೊಳ್ಳುವ ವೇಳೆ, ಬಾದಾಮಿಯ ಶಾಸಕರೂ ಆಗಿರುವ ವಿಧಾನಸಭೆಯವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನೂತನ ಸದಸ್ಯನನ್ನು ವೇದಿಕೆಯಿಂದ ನೂಕಿ ಕೆಳಗೆ ಕಳುಹಿಸಿದ ಪ್ರಸಂಗ ಬಾದಾಮಿ ಪಟ್ಟಣದಲ್ಲಿ ಸೋಮವಾರ ನಡೆಯಿತು.

Advertisement

ಬಾದಾಮಿಯ ಶಾಸಕರ ಗೃಹ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಹಮ್ಮಿಕೊಂಡಿದ್ದರು. ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಆಯ್ಕೆಯಾದ ತಮ್ಮ ಪಕ್ಷದ ಬೆಂಬಲಿಗ ಸದಸ್ಯರನ್ನು ಸನ್ಮಾನಿಸಲಾಯಿತು. ಬಳಿಕ ನೂತನ ಸದಸ್ಯರಲ್ಲಿ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.
ಈ ವೇಳೆ ಕಿತ್ತಲಿ ಗ್ರಾ.ಪಂ. ನೂತನ ಸದಸ್ಯ ಸಂಗಣ್ಣ ಜಾಬಣ್ಣವರ ಎಂಬುವವರು, ವೇದಿಕೆ ಮೇಲೇರಿ ಭಾಷಣ ಮಾಡುತ್ತಿದ್ದರು.

ಇದನ್ನೂ ಓದಿ:2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ ನಮ್ಮೂರಿನ ಸಮಸ್ಯೆ ಇನ್ನೂ ಹಾಗೆ ಇವೆ. ಸಿದ್ದರಾಮಯ್ಯ ಅವರು ನಮ್ಮೂರಿಗೆ ಬಂದು ಹೋದರು. ಆಸರೆ ಮನೆ ಸಂಪೂರ್ಣ ಹಾಳಾಗಿವೆ. ಸಿದ್ದರಾಮಯ್ಯ ಅವರು ಪಿಡಿಒಗೆ ಸೂಚನೆ ನೀಡಿದರೂ ಯಾವ ಸಮಸ್ಯೆಯೂ ಬಗೆಹರಿದಿಲ್ಲ. ಪಕ್ಷದ ಯಾವ ನಾಯಕರೂ ನಮ್ಮೂರಿನ ಕಡೆಗೆ ಬರುತ್ತಿಲ್ಲ. ಕಾಂಗ್ರೆಸ್ ಒಂದು ದೊಡ್ಡ ಪಕ್ಷ ಎಂದು ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಈ ವೇಳೆ ಬಾದಾಮಿ ಮತ್ತು ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್‌ನ ಕೆಲ ಪ್ರಮುಖರು, ಸದಸ್ಯ ಜಾವಣ್ಣವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಇಡೀ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು. ಈ ವೇಳೆ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಸದಸ್ಯ ಸಂಗಣ್ಣ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ, ಸದಸ್ಯ ಸಮಾಧಾನಗೊಳ್ಳದೇ ಭಾಷಣ ಮುಂದುವರೆಸಿದರು.

ಆಗ ಭಾಷಣ ಮಾಡುತ್ತಿದ್ದ ಸದಸ್ಯ ಜಾಬಣ್ಣನವರ ಬಳಿ ಬಂದ ಸಿದ್ದರಾಮಯ್ಯ, ಆಯ್ತಪ್ಪ ಎಲ್ಲ ಮಾಡೋಣ ನಡಿ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದ ಸದಸ್ಯ, ಭಾಷಣ ಮಾಡುತ್ತಲೇ ಕಾಂಗ್ರೆಸ್ ದೊಡ್ಡ ಪಕ್ಷವಿದೆ. ಸ್ಥಳೀಯ ನಾಯಕರೂ ಯಾರೂ ಸ್ಪಂದಿಸುತ್ತಿಲ್ಲ. ನೀವೆಲ್ಲ ಹುಡಗಾಟ ಹಚ್ಚಿದ್ದೀರಾ ಎಂದರು. ಈ ಮಾತಿಗೆ ಆಕ್ರೋಶಗೊಂಡ ಸಿದ್ದರಾಮಯ್ಯ, ಆಯ್ತು ನೀ ನಡಿ ಎಂದು ಮೈಕ್ ಮುಂದೆ ನಿಂತಿದ್ದ ಜಾಬಣ್ಣವರ ಅವರನ್ನು ನೂಕಿ, ವೇದಿಕೆಯಿಂದ ಕೆಳಗೆ ಕಳುಹಿಸಿದರು.

Advertisement

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ವಿಧಾನಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ ಮುಂತಾದವರು ವೇದಿಕೆ ಮೇಲಿದ್ದರು. ಇವರೆಲ್ಲರ  ಎದುರೇ ಗ್ರಾ.ಪಂ. ಸದಸ್ಯ ಸಂಗಣ್ಣ ಜಾಬಣ್ಣವರ, ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next