Advertisement

ಮಂಗಳೂರು ಭೇಟಿಗೆ ನಿರಾಕರಣೆ : ಹಕ್ಕುಚ್ಯುತಿ ಮಂಡನೆ :ಸಿದ್ದರಾಮಯ್ಯ

10:26 AM Dec 22, 2019 | Team Udayavani |

ಬೆಂಗಳೂರು: ಪೊಲೀಸರ ಗೋಲಿಬಾರ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಲು ಮಂಗಳೂರಿಗೆ ತೆರಳಲು ಅವಕಾಶ ನೀಡದಿರುವುದರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ, ಕೊಪ್ಪಳ, ಬೀದರ್‌, ತುಮಕೂರಿನಲ್ಲಿ ಯಾವುದೇ ಗಲಾಟೆಯಾಗುತ್ತಿಲ್ಲ. ಆದರೂ, ಅಲ್ಲಿ ನಿಷೇಧಾಜ್ಞೆ ಜಾರಿ ಏಕೆ?ಎಂದು ಕಿಡಿಕಾರಿದರು.

Advertisement

ಕಾವೇರಿ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಪರಿ ಹೀಗಿತ್ತು;

– ಪ್ರತಿಪಕ್ಷ ನಾಯಕನಾಗಿರುವ ನಾನು ಎಲ್ಲಿಗೆ ಬೇಕಾದರೂ ಭೇಟಿ ನೀಡಬಹುದು. ಆದರೆ, ಬಿಜೆಪಿ ಸರ್ಕಾರ ನನ್ನ ಹಕ್ಕನ್ನೇ ಕಿತ್ತುಕೊಂಡಿದ್ದು, ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ.

– ಪೊಲೀಸರು ಮಂಗಳೂರು ಭೇಟಿಗೆ ಅವಕಾಶ ನೀಡದೇ ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ನೊಂದವರಿಗೆ ಸಾಂತ್ವನ ಹೇಳಲೂ ಸಹ ಅವಕಾಶ ನೀಡುತ್ತಿಲ್ಲ. ಶುಕ್ರವಾರ ಹಾಗೂ ಶನಿವಾರ ಎರಡು ಬಾರಿ ಭೇಟಿಗೆ ಯತ್ನಿಸಿದರೂ ಅವಕಾಶ ನೀಡಲಿಲ್ಲ. ಡಿ.22ರವರೆಗೂ ಮಂಗಳೂರಿಗೆ ಬರದಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಇದನ್ನು ಜನತೆ ಎಂದಿಗೂ ಸಹಿಸುವುದಿಲ್ಲ. ಹೀಗಾಗಿ, ಸೋಮವಾರ ಮಂಗಳೂರಿಗೆ ಭೇಟಿ ನೀಡುತ್ತೇನೆ.

– ಮಂಗಳೂರಿನಲ್ಲಿ ಇಬ್ಬರು ಗೋಲಿಬಾರ್‌ಗೆ ಬಲಿಯಾಗಿದ್ದರೂ, ಪೊಲೀಸರೇ ಗುಂಡು ಹೊಡೆದಿದ್ದೇವೆ, ಆದರೆ, ಸಾವಾಗಿಲ್ಲ ಎನ್ನುತ್ತಾರೆಂದರೆ ಏನರ್ಥ?. ಮಂಗಳೂರಿನಲ್ಲಿ ಗೋಲಿಬಾರ್‌ ಮಾಡುವ ಅವಶ್ಯಕತೆಯಿತ್ತೇ?.

Advertisement

– ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ದಾರಿಗಳಿದ್ದವು. ಸರ್ಕಾರ ಹಾಗೂ ಪೊಲೀಸರು ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ನಮಗೆ ಮಂಗಳೂರು ಭೇಟಿಗೆ ಅವಕಾಶ ಕೊಡುತ್ತಿಲ್ಲ. ಆದರೆ, ಯಡಿಯೂರಪ್ಪ, ಗೃಹ ಸಚಿವರ ಮಂಗಳೂರು ಭೇಟಿಗೆ ಅವಕಾಶ ಕೊಡುತ್ತಾರೆ. ಅಲ್ಲಿನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳುವ ಪೊಲೀಸರು ಇವರಿಗೇಕೆ ಅವಕಾಶ ಕೊಟ್ಟಿದ್ದಾರೆ.

– ನಾನು ಮುಖ್ಯಮಂತ್ರಿಯಾಗಿ¨ªಾಗ ಯಾವುದೇ ಲಾಠಿಚಾರ್ಚ್‌ ಮಾಡಿಸಿರಲಿಲ್ಲ. ಕೇಂದ್ರದ ಮಂತ್ರಿಯೇ “ಗುಂಡು ಹಾರಿಸಿ’ ಎಂದು ಇಲ್ಲಿನ ಪೊಲೀಸರಿಗೆ, ಸರ್ಕಾರಕ್ಕೆ ಸೂಚಿಸುತ್ತಾರೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಬಾಹಿರ ನಡೆ. ಹೀಗಾಗಿ, ಕೇಂದ್ರ ಸಚಿವ ಸುರೇಶ್‌ ಅಂಗಡಿ ವಿರುದ್ಧ ಕ್ರಮ ಜರುಗಿಸಬೇಕು.

– ಮಂಗಳೂರಿಗೆ ಬರದಂತೆ ನನಗೆ ನೋಟಿಸ್‌ ನೀಡಿದ್ದಾರೆ. ರೈಲು, ಬಸ್ಸು, ಕಾರಿನಲ್ಲಿ ಬರದಂತೆಯೂ ಸೂಚಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ?, ವಿರೋಧ ಪಕ್ಷ ಇರುವುದು ಏಕೆ? ಎಂಬ ಪ್ರಶ್ನೆ ಮೂಡುತ್ತದೆ.

– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ದಕ್ಷ ಆಡಳಿತ ಇಲ್ಲದೇ ಇರುವುದು ಇದಕ್ಕೆಲ್ಲ ಕಾರಣ. ಮಂಗಳೂರು ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫ‌ಲವಾಗಿದೆ.

– ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ನಾವು ನಿರ್ಬಂಧ ಹೇರಿರಲಿಲ್ಲ. ಎಲ್ಲರಿಗೂ ಭೇಟಿಗೆ ಅವಕಾಶ ಕೊಟ್ಟಿದ್ದೆವು. ಕಾವೇರಿ ಗಲಾಟೆಯಲ್ಲಿ ಮಾತ್ರ 144 ನಿಷೇಧಾಜ್ಞೆ ಹಾಕಲಾಗಿತ್ತು . ಅದೂ ಸಹ 24 ಗಂಟೆ ಮಾತ್ರ.

– ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಪೊಲೀಸರೇ ಗೋಲಿಬಾರ್‌ ಮಾಡುತ್ತಾರೆ ಎಂದ ಮೇಲೆ ಗೃಹ ಸಚಿವರು ಇರುವುದಾದರೂ ಏಕೆ? ಇದೆಲ್ಲದಕ್ಕೆ ಸದನದಲ್ಲಿ ಉತ್ತರ ಕೊಡೋದು ಪೊಲೀಸರೇ ಅಥವಾ ಗೃಹ ಸಚಿವರೇ?.

– ಗೃಹ ಸಚಿವ ಬಸವರಾಜ್‌ ಬೊಮ್ಮಾಯಿಯವರು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು.

– ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರೇ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಉತ್ತರ ಪ್ರದೇಶದಲ್ಲಿ ಹನ್ನೊಂದು ಮಂದಿ ಪ್ರಾಣತೆತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವ ನಾಯಕರೂ ಹೋರಾಡಿದವರಲ್ಲ.

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ ತೆಗೆದುಕೊಳ್ಳುತ್ತದೆ.
– ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next