Advertisement

ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ :CM ಹೇಳಿಕೆಗೆ ಸಿದ್ದು ತಿರುಗೇಟು

06:57 PM Jan 13, 2021 | Team Udayavani |

ಬೆಂಗಳೂರು: ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಯಡಿಯೂರಪ್ಪ ಹೇಳಿರುವ ಹಾಗೆ ನಾನು ಈವರೆಗೆ ಗೋಮಾಂಸವನ್ನು ತಿಂದಿಲ್ಲ. ತಿನ್ನಬೇಕು ಎನಿಸಿದರೆ ತಿನ್ನುತ್ತೇನೆ ಎಂದಷ್ಟೇ ಹೇಳಿದ್ದೆ ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿಯವರು ಕಾಂಗ್ರೆಸ್‌ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಸ್ವಂತ ಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್‌ ಪಕ್ಷ. ಅವರೇನಾದರೂ ಒಂದೈದು ವರ್ಷ ಪೂರ್ತಿ ಮುಖ್ಯಮಂತ್ರಿಯಾಗಿದ್ದರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಯೋಜನೆ ಮನೆ ಮನೆಗೆ ತಲುಪಿಸಿ; ಸಚಿವೆ ಶಶಿಕಲಾ ಜೊಲ್ಲೆ

ಎಚ್‌.ವಿಶ್ವನಾಥ್‌ ಅವರು ತಮಗೆ ಲೋಕಸಭೆಗೆ ಟಿಕೆಟ್‌ ಕೊಡಿಸಿದ್ದು, 2008 ರಲ್ಲಿ ವಿಧಾನಸಭೆಗೆ ಟಿಕೆಟ್‌ ಕೊಡಿಸಿದ್ದು ಯಾರು ಎಂಬುದನ್ನು ನೆನಪುಮಾಡಿಕೊಂಡು ಹೇಳಲಿ. ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಬಿಜೆಪಿ, ಯಡಿಯೂರಪ್ಪ ಇವರನ್ನು ಮಂತ್ರಿ ಮಾಡಿಲ್ಲ ಟಾಂಗ್‌ ನೀಡಿದ್ದಾರೆ.

Advertisement

ಕಳೆದ 48 ದಿನಗಳಿಂದ ದೆಹಲಿಯಲ್ಲಿ ರೈತರು, ಮಳೆ, ಚಳಿ, ಹಸಿವು ಯಾವುದನ್ನೂ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆಯೇ ರೈತರ ಎಲ್ಲ ಕಷ್ಟ ನಷ್ಟಗಳಿಗೆ ನೇರ ಕಾರಣ.

ಸುಪ್ರೀಂಕೋರ್ಟ್‌ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದಥ. ಅದೇ ನ್ಯಾಯಾಲಯ ರೈತರಿಗೆ ಪ್ರತಿಭಟನೆ ಮುಂದುವರೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿದೆ ಎಂದರೆ ಆವರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದರ್ಥ ಎಂದು ಹೇಳಿದ್ದಾರೆ.

ಬಿಜೆಪಿಯವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳುತ್ತಾರೆ. ಇನ್ನೊಂದು ಕಡೆ ಕುರಿ, ಕೋಳಿ ಗೋಮಾಂಸ ತಿನ್ನುವರರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ. ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಸಂಸ್ಕೃತಿ, ಆಹಾರ, ಆಚರಣೆ ಗೌರವಿಸಿ ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದು ಎಂದು ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next