Advertisement

ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ : ಖರ್ಗೆ

10:05 AM Jan 28, 2020 | sudhir |

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೊಂದಿಗೆ ಜನಾರ್ಧನ ಹೊಟೇಲ್‌ಗೆ ತಿಂಡಿ ತಿನ್ನಲು ಹೋಗಿದ್ದಾಗ ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕವನ್ನು ಹೈಕಮಾಂಡ್‌ ನೋಡಿಕೊಳ್ಳುತ್ತದೆ. ನಮ್ಮಿಬ್ಬರ ಭೇಟಿಗೆ ಮಾಧ್ಯಮಗಳಲ್ಲಿ ವಿಶೇಷ ಅರ್ಥ ಕಲ್ಪಿಸುವುದರಿಂದ ನಮ್ಮ ನಡುವೆ ಗೊಂದಲ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸ ಇದೆ. ಕಾಂಗ್ರೆಸ್‌ನಲ್ಲಿ ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳದರು.

ಇದೇ ವೇಳೆ, ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ತನ್ನು ರದ್ದು ಪಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಮೇಲ್ಮನೆ ರದ್ದು ಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಆದರೆ, ಆಂಧ್ರ ಪ್ರದೇಶದಲ್ಲಿ ಮೇಲ್ಮನೆ ತೆಗೆದು ಹಾಕುವುದು ಮತ್ತು ಆರಂಭಿಸುವುದು ಮಕ್ಕಳಾಟವಾಗಿದೆ. ರಾಜ್ಯದಲ್ಲಿ ಒಂದು ಸಾಂವಿಧಾನಿಕ ಸಂಸ್ಥೆ ಆರಂಭಿಸಿದ ಮೇಲೆ ಅದು ಶಾಸ್ವತವಾಗಿರಬೇಕು.

ಮೇಲ್ಮನೆ ಕೇವಲ ಸೀಟು, ಅಧಿಕಾರ ಸಿಗದವರಿಗೆ ಇರುವುದಿಲ್ಲ. ವಿಧಾನ ಪರಿಷತ್ತಿನಲ್ಲಿ ಕಾನೂನುಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಅವಕಾಶ ಇರುತ್ತದೆ. ಕೆಳಮನೆಯಲ್ಲಿ ಕಾನೂನು ಜಾರಿಯಲ್ಲಿ ವ್ಯತ್ಯಾಸವಾಗಿದ್ದರೆ, ಮೇಲ್ಮನೆಯಲ್ಲಿ ಅದನ್ನು ಸರಿಪಡಿಸಲು ಅವಕಾಶ ಇರುತ್ತದೆ. ಆದರೆ, ಆಂಧ್ರ ಪ್ರದೇಶದಲ್ಲಿ ಇಂತಹ ಮಹತ್ವದ ತೀರ್ಮಾನವನ್ನು ತರಾತುರಿಯಲ್ಲಿ ತೆಗೆದುಕೊಂಡಿರುವುದು ಒಳ್ಳೆಯ ಸಂದೇಶ ರವಾನೆಯಾಗುವುದಿಲ್ಲ ಎಂದು ಹೇಳಿದರು.

Advertisement

ವಿಧಾನ ಪರಿಷತ್‌ಗಳಂತೆ ರಾಜ್ಯ ಸಭೆಯನ್ನು ರದ್ದುಗೊಳಿಸಲು ಅವಕಾಶ ಇಲ್ಲ. ರಾಜ್ಯಸಭೆಯ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಹೇಳಿದರು.

ಗೊಂದಲಕ್ಕೊಳಗಾದ ಹಿರಿಯ ನಾಯಕರು
ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗಣರಾಜ್ಯೋತ್ಸವದ ದಿನ ಸಿದ್ದರಾಮಯ್ಯ ಅವರನ್ನು ಉಪಹಾರದ ನೆಪದಲ್ಲಿ ಭೇಟಿ ಮಾಡಿರುವುದು ಪಕ್ಷದ ಹಿರಿಯ ನಾಯಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ವಿರುದ್ಧ ಬಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರೇ ಅವರೊಂದಿಗೆ ಮಾತುಕತೆ ನಡೆಸಿದ್ದು, ಮೂಲ ಕಾಂಗ್ರೆಸ್‌ ನಾಯಕರಾದ ಬಿ.ಕೆ. ಹರಿಪ್ರಸಾದ್‌, ಕೆ.ಎಚ್‌.ಮುನಿಯಪ್ಪ ಅವರು ಆಶ್ಚರ್ಯ ವ್ಯಕ್ತಪಡಿಸಿ, ಮಲ್ಲಿಕಾರ್ಜುನ ಖರ್ಗೆಯವರಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದ್ದು, ತಮ್ಮಿಬ್ಬರ ಭೇಟಿಯಲ್ಲಿ ಯಾವುದೇ ಮಹತ್ವದ ಚರ್ಚೆಯಾಗಿಲ್ಲ ಎಂದು ಖರ್ಗೆ ಹಿರಿಯ ನಾಯಕರಿಗೆ ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ ಡಿಕೆಶಿ ಲಾಬಿ:
ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮಧ್ಯಪ್ರದೇಶದ ದೇವಸ್ಥಾನದಲ್ಲಿ ವಿಶೇಷ ಹೋಮ ಮಾಡಿದ ನಂತರ ಎರಡು ದಿನ ದೆಹಲಿಯಲ್ಲಿಯೇ ಉಳಿದುಕೊಂಡು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next