Advertisement

ಸಿದ್ದುಗೆ ಕೈ ತಪ್ಪುತ್ತಾ ಪ್ರತಿಪಕ್ಷದ ನಾಯಕನ ಸ್ಥಾನ?

10:08 AM Jan 19, 2020 | Team Udayavani |

– ಎರಡೂ ಹುದ್ದೆ ಬೇಡಿಕೆಗೆ ಹಿರಿಯರ ಪ್ರತಿತಂತ್ರ
– ಸಿದ್ದುರನ್ನು ಕಾರ್ಯಕಾರಿ ಸಮಿತಿಗೆ ಕಳುಹಿಸಲು ಚಿಂತನೆ

Advertisement

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕತ್ವದ ಚದುರಂಗದಾಟದಲ್ಲಿ ಎರಡೂ ಬಣಗಳಿಂದ ದಿನಕ್ಕೊಂದು ದಾಳ ಉರುಳುತ್ತಿದ್ದು, ಹುದ್ದೆ ವಿಭಜನೆಗೆ ವಿರೋಧಿಸಿದ್ದ ಸಿದ್ದರಾಮಯ್ಯ ಅವರಿಗೆ ಎರಡೂ ಹುದ್ದೆ ತಪ್ಪಿಸಲು ಮೂಲ ಕಾಂಗ್ರೆಸ್ಸಿಗರು ಕಸರತ್ತು ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಹೆಸರು ಅಂತಿಮವಾಗುತ್ತಿದ್ದಂತೆ ವಿಭಾಗವಾರು ಕಾರ್ಯಾಧ್ಯಕ್ಷರ ನೇಮಕ ಮಾಡುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಇದಕ್ಕೆ ಬದಲಾಗಿ ಮೂಲ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಅವರಿಗೆ ಒಂದೇ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರನ್ನು ನೇಮಿಸಲು ಆಗ್ರಹಿಸಿದ್ದಾರೆ. ಮೂಲ ಕಾಂಗ್ರೆಸ್‌ನವರ ದಾಳದಿಂದ ವಿಚಲಿತರಾಗಿರುವ ಸಿದ್ದರಾಮಯ್ಯ ಅವರು ತಮಗೆ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡೂ ಹುದ್ದೆ ನೀಡುವುದಾದರೆ ಮುಂದುವರೆಯುವ ಸಂದೇಶವನ್ನು ಶುಕ್ರವಾರ ಹೈಕಮಾಂಡ್‌ಗೆ ರವಾನಿಸಿದ್ದರು.

ಸಿದ್ದರಾಮಯ್ಯ ಬೆದರಿಕೆ ತಂತ್ರಕ್ಕೆ ಮೂಲ ಕಾಂಗ್ರೆಸ್‌ ನಾಯಕರು ಪ್ರತಿ ತಂತ್ರ ರೂಪಿಸಿದ್ದಾರೆ. ಅವರ ಪರವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎದುರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಲಾಬಿ ಮಾಡುತ್ತಿದ್ದಾರೆ ಎಂಬುದನ್ನು ಅರಿತು ಅಹ್ಮದ್‌ ಪಟೇಲ್‌, ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ ಸೇರಿ ಹಿರಿಯ ನಾಯಕರು ವೇಣುಗೋಪಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷರ ಜೊತೆಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಮಾಡುವಂತೆ ಸಿದ್ದರಾಮಯ್ಯ ಅವರ ಪರವಾಗಿ ಸೋನಿಯಾ ಗಾಂಧಿಯವರ ಮುಂದೆ ವಾದ ಮಾಡುವುದಾದರೆ, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನವೂ ಬೇರೆ ಬೇರೆಯಾಗಬೇಕೆಂಬ ಬೇಡಿಕೆಗೂ ಮನ್ನಣೆ ನೀಡುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸಿದ್ದರಾಮಯ್ಯ ಅವರು ಎರಡೂ ಹುದ್ದೆ ಬೇಡ ಎಂದರೆ ಅವರನ್ನು ಸಿಡಬುÉಸಿ ಸದಸ್ಯರನ್ನಾಗಿ ನೇಮಿಸಿ, ಅವರ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಬಿ.ಪಾಟೀಲರನ್ನು ಪ್ರತಿಪಕ್ಷದ ನಾಯಕರನ್ನಾಗಿ ನೇಮಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲ ಕಾಂಗ್ರೆಸ್‌ ನಾಯಕರ ಒತ್ತಡದ ಬಗ್ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು, ಒಂದೇ ಹುದ್ದೆ ನೀಡುವುದಾದರೆ ನನಗೆ ಬೇಡ, ಬೇರೆಯವರಿಗೆ ಕೊಡಿ ಎನ್ನುವ ತಮ್ಮ ವಾದವನ್ನೇ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಸೋನಿಯಾ ಗಾಂಧಿಯವರ ಗಮನಕ್ಕೆ ತರುವುದಾಗಿ ವೇಣುಗೋಪಾಲ್‌ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಗೊಂದಲಗಳಿಂದಾಗಿ ಸೋಮವಾರದ ನಂತರವೇ ಕೆಪಿಸಿಸಿ ನೇಮಕ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಸತೀಶ್‌ ಜಾರಕಿಹೊಳಿ ಕಾರ್ಯಾಧ್ಯಕ್ಷ ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್‌ಗೆ ನೀಡುವುದು ಖಚಿತವಾಗಿರುವುದರಿಂದ ನಾಲ್ಕು ಕಾರ್ಯಧ್ಯಕ್ಷರ ಬದಲಾಗಿ ಇಬ್ಬರನ್ನು ನೇಮಕ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈಗಿರುವ ಈಶ್ವರ ಖಂಡ್ರೆ ಜತೆಗೆ, ಮಾಜಿ ಸಚಿವ, ಬೆಳಗಾವಿ ವಿಭಾಗಕ್ಕೆ ಸೇರಿರುವ ಸತೀಶ್‌ ಜಾರಕಿಹೊಳಿ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಈ ಕುರಿತಂತೆ ಸತೀಶ್‌ ಜಾರಕಿಹೊಳಿ ಶುಕ್ರವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹಮದ್‌ ಪಟೇಲ್‌ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ.

ಪ್ರತ್ಯೇಕ ಸೂಕ್ತವಲ್ಲ
ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನಹುದ್ದೆಗಳನ್ನು ಇಬ್ಬರಿಗೆ ನೀಡುವುದು ಸೂಕ್ತವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಈ ಸ್ಥಾನಗಳ ಹಂಚಿಕೆಗೆ ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಎರಡೂ ಜವಾಬ್ದಾರಿಗಳು ಒಬ್ಬರ ಬಳಿ ಇರಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.
ಕರ್ನಾಟಕ ರಾಜಕಾರಣದ ಆರಂಭದಿಂದಲೂ ಈ ಎರಡು ಹು¨ªೆಗಳನ್ನು ಪ್ರತ್ಯೇಕಗೊಳಿಸಿ ಪಕ್ಷ ನಿರ್ವಹಣೆ ಮಾಡಿಲ್ಲ. ಈಗಲೂ ಮಾಡುವುದು ಸೂಕ್ತವಲ್ಲ. ಮಹಾರಾಷ್ಟ್ರದಲ್ಲಿ ಈ ಹುದ್ದೆಗಳನ್ನು ವಿಭಜಿಸಲಾಗಿದೆ. ಆದರೆ, ಅಲ್ಲಿನ ರಾಜಕೀಯ ಪರಿಸ್ಥಿತಿಗಳು ಬೇರೆ ಇಲ್ಲಿನ ಪರಿಸ್ಥಿತಿಗಳು ಬೇರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next