ಬಾಗಲಕೋಟೆ: ಕ್ಷೇತ್ರ ಆಯ್ಕೆ ಗೊಂದಲದಲ್ಲಿರುವ ಸಿದ್ದರಾಮಯ್ಯ ಕೆಲವು ತಿಂಗಳ ಹಿಂದೆ ಬಾದಾಮಿಯಿಂದ ಓಡಾಡಲು ದೂರವಾಗುತ್ತದೆ, ಇಲ್ಲಿಂದ ಸ್ಪರ್ಧಿಸಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ ಇದೀಗ ಪುನಃ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಗಂಭೀರ ಚರ್ಚೆ ನಡೆಸಿದಂತೆ ಕಾಣುತ್ತಿದೆ.
ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಳ್ಳದಿರಲು ಸ್ವತಃ ರಾಹುಲ್ ಗಾಂಧಿ ಸೂಚನೆ ನೀಡಿದ ಬೆನ್ನಲ್ಲೇ ಬಾದಾಮಿಯಿಂದ ಸ್ಪರ್ಧಿಸಬೇಕೋ, ಬೇಡವೋ ಎಂಬ ಗೊಂದಲ ಮುಂದುವರಿದಿದೆ.
ಇನ್ನೊಂದೆಡೆ ಬಾದಾಮಿ ಯಿಂದಲೂ ಸ್ಪರ್ಧೆಗೆ ಮೀನಾಮೇಷ ಎಣಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟು, ಕೋಲಾರದಿಂದ ಸ್ಪರ್ಧಿಸಬೇಕೆಂಬ ಆಲೋಚನೆ ಹಿಂದೆ ಬೇರೆಯೇ ಗುಟ್ಟಿದೆ ಎನ್ನಲಾಗಿದೆ. 2018ರಲ್ಲಿ ಈ ಕ್ಷೇತ್ರಕ್ಕೆ ಡಾ|ದೇವರಾಜ ಪಾಟೀಲ್‌ಗೆ ಟಿಕೆಟ್ ಘೋಷಣೆಯಾಗಿತ್ತು. ಬಳಿಕ ಸಿದ್ದರಾಮಯ್ಯ ಈ ಕ್ಷೇತ್ರಕ್ಕೆ ಬಂದಾಗ ಅವರು ತಮ್ಮ ನಾಯಕರ ಪರವಾಗಿ ಚುನಾವಣೆ ನಡೆಸಿದರು. ಅದೇ ಚಿಮ್ಮನಕಟ್ಟಿಗೆ ಟಿಕೆಟ್ ಘೋಷಿಸಿ, ಅವರನ್ನು ಹಿಂದೆ ಸರಿಸಿ ಸಿದ್ದರಾಮಯ್ಯ ಸ್ಪರ್ಧಿಸಿದ್ದರೆ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಆದರೂ ಚಿಮ್ಮನಕಟ್ಟಿ ಬೆಂಬಲಿಗರು ಆಗ ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಡ ಕೂಡಾ ಹಾಕಿದ್ದರು.
ಪಕ್ಷದ ಹಿರಿಯರ ಸಂಧಾನ ಹಿನ್ನೆಲೆಯಲ್ಲಿ ಚಿಮ್ಮನಕಟ್ಟಿ ಕೂಡ ಕಣಕ್ಕಿಳಿಯದೆ ಸಿದ್ದರಾಮಯ್ಯ ಪರ ಚುನಾವಣೆ ಪ್ರಚಾರ ಮಾಡಿದ್ದರು. ಆಗ ಪಕ್ಷದ ಹಿರಿಯರ ಸಮ್ಮುಖ ದಲ್ಲಿ ನಡೆದ ಮಾತುಕತೆಯಲ್ಲಿ ಚಿಮ್ಮನಕಟ್ಟಿ ಗೆ ವಿಧಾನ ಪರಿಷತ್ತಿನ ಸದಸ್ಯತ್ವದ ಭರವಸೆ ನೀಡಲಾಗಿತ್ತು. ಮುಂದೆ ಸರ್ಕಾರ ಬರಲಿಲ್ಲ. ಅವರನ್ನು ಎಂಎಲ್‌ಸಿ ಮಾಡಲಾ ಗಲಿಲ್ಲ. ಈ ಅಸಮಾಧಾನವನ್ನು ಸ್ವತಃ ಚಿಮ್ಮನಕಟ್ಟಿ ಬಹಿರಂಗವಾಗಿ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಕ್ಷೇತ್ರ ಬಿಟ್ಟು ಕೊಟ್ಟ ನನಗೆ ಏನು ಮಾಡಿದಿರಿ ಎಂದು ನೇರವಾಗಿ ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸಿದ್ದರು. ಆ ವೇಳೆ ಚಿಮ್ಮನಕಟ್ಟಿ ಅವರ ಮನೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ 2023ರಲ್ಲಿ ನಿಮ್ಮ ಪುತ್ರನೇ ಈ ಕ್ಷೇತ್ರದಿಂದ ಸ್ಪರ್ಧಿಸಲಿ. ನಾವು ಅವರಿಗೆ ಸಹಕಾರ ಕೊಡುತ್ತೇವೆಂದು ಹೇಳಿದ್ದರು ಎನ್ನಲಾಗಿದೆ. ಚಿಮ್ಮನಕಟ್ಟಿ ಪುತ್ರನಿಗೆ ಮಾತು ಕೊಟ್ಟು ಈಗ ಮತ್ತೆ ಬಾದಾಮಿಯಿಂದ ಹೇಗೆ ಸ್ಪರ್ಧಿಸಲಿ ಎಂಬ ಅಳಕು ಸಿದ್ದರಾಮಯ್ಯರನ್ನು ಕಾಡುತ್ತಿದೆ.
ಇಂದು ನಿರ್ಧಾರ ಸಾಧ್ಯತೆ: ಇದೆಲ್ಲದರ ಮಧ್ಯೆ ಶುಕ್ರವಾರ ಬಾದಾಮಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿದ್ದು ಆಪ್ತ ಹೊಳಬಸು ಶೆಟ್ಟರ, ಬಾದಾಮಿ, ಗುಳೇದಗುಡ್ಡ ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿ ಹಳ್ಳಿ ಯಿಂದಲೂ ಜನರನ್ನು ಸೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರಿ ನವರೆಗೆ ತೆರಳಿ ಒತ್ತಾಯ ಮಾಡಿರುವ ಜನರು ಈ ಕಾರ್ಯಕ್ರಮ ವೇಳೆ ಪಟ್ಟು ಹಿಡಿಯಲಿದ್ದಾರೆ ಎನ್ನಲಾಗಿದೆ.
ಬಾದಾಮಿಯ ಎಪಿಎಂಸಿ ಆವರಣದಲ್ಲಿ ಸುಮಾರು 50 ಸಾವಿರ ಜನ ಸೇರಿಸಲು ತಯಾರಿ ನಡೆದಿದೆ. ಅಲ್ಲದೇ 1 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಕೂಡ ನಡೆಯಲಿದೆ. ಇದು ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಶಾಸಕರಾಗಿ, ಬಹಿರಂಗ ಸಮಾವೇಶದಲ್ಲಿ ಕೊನೆಯ ಬಾರಿಗೆ ಭಾಗವಹಿಸಲಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಯಾವಾಗ ರೋಡ್ ಶೋ ಏರ್ಪಡಿಸಲಾಗಿ ದೆಯೋ ಆಗ ಪುನಃ ಇಲ್ಲಿಂದಲೇ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಾದಾಮಿ ಸೇಫ್
ಸಿದ್ದರಾಮಯ್ಯಗೆ ಈ ಬಾರಿ ಬಾದಾಮಿ ಕ್ಷೇತ್ರ ಅತ್ಯಂತ ಸೇಫ್ ಆಗಿದ್ದು, ಇಲ್ಲಿಂದಲೇ ಸ್ಪರ್ಧಿಸ ಬೇಕೆಂಬ ಒತ್ತಡ ಒಂದೆಡೆ ಇದೆ. ಅವರ ಪಕ್ಕಾ ಬೆಂಬಲಿಗರು ಹೆಲಿಕಾಪ್ಟರ್ ಕೊಡಿಸುವು ದಾಗಿ, ನೀವು ಕೇವಲ ನಾಮ ಪತ್ರ ಸಲ್ಲಿಸಿ ಹೋಗಿ ನಾವು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ಆಗ ಚಿಮ್ಮನಕಟ್ಟಿ ಕುಟುಂಬಕ್ಕೆ ರಾಜಕೀಯ ಅಧಿಕಾರ ಕೊಡುವ ಕುರಿತು ತೀರ್ಮಾನ ಮಾಡೋಣ, ಇದೊಂದು ಬಾರಿ ಇಲ್ಲಿಂದಲೇ ಸ್ಪರ್ಧಿಸಿ ನಿಮಗೆ ರಾಜಕೀಯ ಪುನರ್ ಜನ್ಮ ನೀಡಿದ ಕ್ಷೇತ್ರ, ಬಿಡಬೇಡಿ ಎಂದು ಒತ್ತಡ ಹೇರುತ್ತಿದ್ದರೂ ಸಿದ್ದರಾಮಯ್ಯ ಪೂರ್ಣ ಮನಸ್ಸು ಬಾದಾಮಿ ಕಡೆ ಇಲ್ಲ ಎಂದು ಹೇಳಲಾಗುತ್ತಿದೆ.
ವಿಪಕ್ಷದಲ್ಲಿದ್ದರೂ ಬಾದಾಮಿ ಕ್ಷೇತ್ರದ ಇತಿಹಾಸದಲ್ಲಿ ಆಗದ ಶಾಶ್ವತ ಯೋಜನೆಗಳು ಇಲ್ಲಿ ಆಗಿವೆ. ಪ್ರತಿ ಹಳ್ಳಿಗಳೂ, ಎಲ್ಲ ಸಮುದಾಯ ದವರಿಗೂ ಅವರು ಅನುದಾನ ಕಲ್ಪಿಸಿ ದ್ದಾರೆ. ಹೀಗಾಗಿ ಜನರು ಇದೊಂದು ಬಾರಿ ಇಲ್ಲಿಂದಲೇ ಸ್ಪರ್ಧಿಸಿ ಸಿಎಂ ಆಗಬೇಕೆಂದು ಬಯಸಿದ್ದಾರೆ.
– ಹೊಳಬಸು ಶೆಟ್ಟರ, ಕಾಂಗ್ರೆಸ್ ಮುಖಂಡ
– ಶ್ರೀಶೈಲ ಕೆ. ಬಿರಾದಾರ