Advertisement

ಚುನಾವಣೆಗಳಲ್ಲಿ ಸೋಲುವ ಭೀತಿ, ತೆನೆ-ಕಮಲ ಹೊಂದಾಣಿಕೆ ನಾಟಕ ಬಯಲು : ಸಿದ್ದರಾಮಯ್ಯ 

02:38 PM Dec 09, 2021 | Team Udayavani |

ಅರಕಲಗೂಡು : ಬಿಜೆಪಿ ಮತ್ತು ಜೆಡಿಎಸ್‌ ಹೊಂದಾಣಿಕೆಯ ನಾಟಕ ಬಯಲಾಗಿದೆ. ರಾಜ್ಯದ ಜನ ತಿರಸ್ಕರಿಸುವ ಮಾತುಗಳು ಕೇಳಿ ಬರುತ್ತಿವೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಉಭಯ ಪಕ್ಷಗಳು, ವಿಧಾನ ಪರಿಷತ್‌ ಚುನಾವಣೆಯ ಅಭ್ಯರ್ಥಿಗಳನ್ನ ಕಣಕ್ಕಿಳಿಸಿರುವುದನ್ನ ಗಮನಿಸಿದರೆ, ಯಾವ ಸಾಮಾಜಿಕ ನ್ಯಾಯವನ್ನ ಸಮಾಜಕ್ಕೆ ನೀಡುತ್ತಿದ್ದಾರೆ ಎಂಬುವುದು
ತಿಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಪಂ, ತಾಪಂ ಚುನಾವಣೆಗಳಲ್ಲಿ ಸೋಲುವ ಭೀತಿಯಿಂದ ಚುನಾವಣೆಯನ್ನು ಮುಂದೂಡುತ್ತಾ ಬರುತ್ತಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ ಗೆಲುವು ನಿಶ್ಚಿತ. ಮತದಾರರು ದೇವೇಗೌಡರ ಕುಟುಂಬದ ಅಧಿಕಾರ ದಾಹದ ವಿರುದ್ಧ ಮತ ಹಾಕುವ ಮೂಲಕ ಕಾಂಗ್ರೆಸ್‌ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನ್ನಲ್ಲಿದೆ
ಎಂದು ತಿಳಿಸಿದರು. ರಾಜ್ಯದಲ್ಲಿ 20 ಸ್ಥಾನಗಳಲ್ಲಿ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯವನ್ನ ಎತ್ತಿ ಹಿಡಿಯುವ ಮೂಲಕ ಹಿಂದುಳಿದ ವರ್ಗಗಳಿಗೂ ಆದ್ಯತೆ ಮೇರೆಗೆ ಅಭ್ಯರ್ಥಿಗಳನ್ನ ಚುನಾವಣೆಯಲ್ಲಿ ನಿಲ್ಲಿಸಲಾಗಿದೆ. 15 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ. ನಾನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಂದರ್ಭದಲ್ಲಿ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯವೇ ನಮಗೆ ವರದಾನವಾಗಲಿದೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ತನಿಖೆ ನಡೆಸಿ: ಪ್ರಧಾನಿ ಮೋದಿ ಅವರಿಗೆ ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದ ಪತ್ರ ನನ್ನಲ್ಲೂ ಇದೆ. ಆತ ಬರೆದಿರುವ ಪತ್ರದಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳಿಗೆ ಶೇ.10, ಎಂಎಲ್‌ಎ, ಎಂಪಿ ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ತಲೆದೂರಿದ್ದು, ಈಗಾಗಲೇ ನಮಗೆ ಶೇ.4ರಷ್ಟು ಲಂಚಕ್ಕೆ ಹಣ ನೀಡಬೇಕಾಗಿದೆ. ಇದರ ಬಗ್ಗೆ ತನಿಖೆ ನಡೆಸಿ, ಗುತ್ತಿಗೆದಾರರನ್ನ ಉಳಿಸುವಂತೆ ಮನವಿ ಮಾಡಿದ್ದರೂ ದೇಶದ ಅಭಿವೃದ್ಧಿಯ ಬಗ್ಗೆ ಮಾತುಗಳನ್ನಾಡುವ ಪ್ರಧಾನಿ
ಮೌನ ವಹಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಂದ ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ.

ಭ್ರಷ್ಟರ ತನಿಖೆಗೆ ಭ್ರಷ್ಟರನ್ನೇ ನಿಯೋಜಿಸುವುದು ಸರಿಯೇ? ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರುಗಳಿಗೆ ವಹಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌-ಬಿಜೆಪಿ ನಡುವೆ ಹೊಂದಾಣಿಕೆ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ತಮ್ಮ ಮತದಾರರು ಸ್ಥಳೀಯವಾಗಿ ಅವರಿಗೆ ಅನುಕೂಲವಾಗುವಂತೆ ಮತ ನೀಡಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಕುಮಾರಸ್ವಾಮಿ ಹೇಳಿಕೆ ಮತ್ತು ಸಹಾಯದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ
ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿರುವುದು ಇವರಿಬ್ಬರ ಒಪ್ಪಂದಕ್ಕೆ ಸಾಕ್ಷಿಯಲ್ಲವೇ. ಇವರಿಬ್ಬರ ಒಳ ಒಪ್ಪಂದ ರಾಜ್ಯದ ಜನತೆಗೆ ತಿಳಿದಿದೆ. ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

Advertisement

ದೇಶಕ್ಕೆ ಮೋದಿ ಕೊಡುಗೆ ಏನು: 8 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಮೋದಿ ಅವರು ದೇಶಕ್ಕೆ ನೀಡಿರುವ ಕೊಡುಗೆ ಏನು, ದೇಶದ ಸಂಪತ್ತನ್ನ ಉಳ್ಳವರಿಗೆ ನೀಡುವ ಕೆಲಸದಲ್ಲಿ ಮುಂದಾಗಿದ್ದಾರೆಯೇ ವಿನಃ ಹೊಸ ಯೋಜನೆಗಳನ್ನ ತರುವಲ್ಲಿ ವಿಫ‌ಲರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : 12 ವರ್ಷಗಳ ಬಳಿಕ ದ್ವಾರಸಮುದ್ರ ಕೆರೆ ಭರ್ತಿ : ಊರಿನ ಜನತೆ, ರೈತರ ಮೊಗದಲ್ಲಿ ಸಂತಸ

ಕಾಂಗ್ರೆಸ್‌ ಅಧಿಕಾರಕ್ಕೆ ತರುವ ವಿಶ್ವಾಸ: ರಾಜ್ಯ ಸರ್ಕಾರದ ಆಡಳಿತ ಗಬ್ಬೆದ್ದು ಹೋಗಿದ್ದು, ಅಭಿವೃದ್ಧಿ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಬೇಸತ್ತು ಹೋಗಿದ್ದು, ಅವರ ಮೂರುವರೇ ವರ್ಷದಲ್ಲಿ ಒಂದು ಮನೆಯನ್ನು ಹಂಚುವಲ್ಲಿ ವಿಫ‌ಲರಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ನೀಡಿದ ಮನೆಗಳಿಗೆ ಹಣ ಬಿಡುಗಡೆ ಮಾಡದೆ, ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ನನ್ನ ಆಡಳಿತದಲ್ಲಿ ನೀಡಿದ ಅನೇಕ ಯೋಜನೆಗಳನ್ನ ಹಿಂಪಡೆದು ಉದ್ಯೋಗ ಖಾತ್ರಿಗೂ ಹಣ ಬಿಡುಗಡೆ ಮಾಡದೆ, ಕೂಲಿಕಾರರಿಗೆ ಕೂಲಿ ನೀಡುವಲ್ಲಿ ವಂಚಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.

ಮಂಜು ಕಾಂಗ್ರೆಸ್‌ ಸೇರ್ಪಡೆ ಪ್ರಶ್ನೆಗೆ ಸಿದ್ದು ಮೌನ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಎ. ಮಂಜು ಬಿಜೆಪಿಯಿಂದ ಕಾಂಗ್ರೆಸ್‌ನತ್ತ ಮುಖ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾ, ಸೇರ್ಪಡೆಯ ವಿಷಯ ನಮ್ಮಗಳ ಮುಂದೆ ಇಲ್ಲ ಎಂದು ತಳ್ಳಿ ಹಾಕುತ್ತಿದ್ದ ಅವರು, ಮಾಧ್ಯಮದವರ ಪ್ರಶ್ನೆಗೆ ಮೌನರಾಗಿ ಎ.ಮಂಜು ವಿಷಯ ಬಿಟ್ಟು, ರಾಜಕೀಯವಾಗಿ ಪ್ರಶ್ನೆ ಕೇಳಿ ಎಂದು ಉತ್ತರ ನೀಡುತ್ತಾ ಸೇರ್ಪಡೆಯ ವಿಷಯದ ಬಗ್ಗೆ ಮೌನ ವಹಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಪಟ್ಟಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನ ಸಾವಿರಾರು ಕಾರ್ಯಕರ್ತರು 475 ಕೆ.ಜಿ ಸೇಬಿನ ಹಾರವನ್ನ ಹಾಕುವ ಮೂಲಕ ಸ್ವಾಗತಿಸಿದರು. ತಾಲೂಕು
ಬ್ಲಾಕ್‌ ಕಾಂಗ್ರೆಸ್‌ ಅಧಕ್ಷ ಪ್ರಸನ್ನಕುಮಾರ, ಜಿಲ್ಲಾಧ್ಯಕ್ಷ ಮಂಜುನಾಥ, ರಾಜ್ಯ ಕೆಪಿಸಿಸಿ ಸದಸ್ಯ ಮಂಜುನಾಥ, ಎಂಎಲ್‌ಸಿ ಗೋಪಾಲಸ್ವಾಮಿ, ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿ ಎಂ. ಶಂಕರ, ಮುಖಂಡರಾದ ಜವರೇಗೌಡ, ದತ್ತ, ಎಂ.ಟಿ.ಕೃಷ್ಣೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next