Advertisement

ಸಿದ್ದರಾಮೇಶ್ವರರು ಸಮಾಜ ಸುಧಾರಕರು

12:41 PM Jan 16, 2017 | |

ದಾವಣಗೆರೆ: ಕಾಯಕಯೋಗಿ, ಹಠಯೋಗಿ, ಶ್ರೀ ಸಿದ್ದರಾಮೇಶ್ವರರು ಸಮಾಜ ಸುಧಾರಣೆಗೆ ಅಪಾರ ಕಾಣಿಕೆ ಸಲ್ಲಿಸಿರುವ ಮಹಾನ್‌ ಶರಣ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ. ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ವಚನಕಾರ-ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 842ನೇ ಜಯಂತಿಯಲ್ಲಿ ಮಾತನಾಡಿದರು.

Advertisement

12ನೇ ಶತಮಾನ ಎಂದರೆ ಎಲ್ಲ ಸಮುದಾಯದವರನ್ನ ಒಗ್ಗೂಡಿಸಿ ಇಡೀ ಸಮಾಜದಲ್ಲಿ ಸಂಚಲನ ಮೂಡಿಸಿದ ಶತಮಾನ. ಬಸವಾದಿ ಶರಣರಲ್ಲಿ ಪ್ರಮುಖರಾದ ಶ್ರೀ ಸಿದ್ದರಾಮೇಶ್ವರರು ಸಮಾಜಕ್ಕೆ ಅವಿಸ್ಮರಣೀಯ ಕಾಣಿಕೆ ನೀಡಿದ್ದಾರೆ ಎಂದು ಸ್ಮರಿಸಿದರು. ಪ್ರತಿಯೊಬ್ಬರ ಜೀವನದಲ್ಲಿ ದಿನದ ಆಗುಹೋಗುಗಳ ಆಲೋಚನೆಯ ತೀರಸ್ಕಾರ ಮಾಡಿದರೆ ಗುರಿ ಮುಟ್ಟಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಶ್ರೀ ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ನೀಡಿದ್ದಾರೆ.

ಅಂತಹ ಮಹಾನೀಯರ ಜೀವನ, ಸಾಧನೆ, ನಮ್ಮ ಬದುಕಿಗೆ ನೀಡಿರುವಂತಹ ಅತ್ಯಮೂಲ್ಯ ಸಂದೇಶವನ್ನು ದಿನದಲ್ಲಿ ಕೆಲವಾರು ಕ್ಷಣಗಳ ಕಾಲವಾದರೂ ಸ್ಮರಿಸಿ, ಅದರಂತೆ ನಡೆದುಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು. 

ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ| ಪ್ರಕಾಶ್‌ ಹಲಗೇರಿ, ಮಹಾರಾಷ್ಟ್ರದ ಸೊಲ್ಲಾಪುರದ ಸಮೀಪದ ಸೊನ್ನಲಿಗೆಯಲ್ಲಿ ಮರಡಿ ಮುದ್ದುಗೌಡ ಮತ್ತು ಶರಣೆ ಸುಗ್ಗವ್ವ ದಂಪತಿಗಳ ಪುತ್ರರಾಗಿ ಕ್ರಿ.ಶ. 1160 ರಲ್ಲಿ ಜನ್ಮ ತಾಳಿದ ಶ್ರೀ ಸಿದ್ದರಾಮೇಶ್ವರರು 1992 ವಚನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. 

ಅವುಗಳಲ್ಲಿ ನೂರಾರು ವಚನಗಳು ಸಂಸಾರ, ಸತಿ-ಪತಿ ಅವಿನಾಭಾವ ಸಂಬಂಧ, ಅನುಸಂಧಾನ, ಕಾಯಕ ತತ್ವಕ್ಕೆ ಮಹತ್ವ ನೀಡಲಾಗಿದೆ ಎಂದು ತಿಳಿಸಿದರು. ಮಹಾನ್‌ ಶರಣ, ಅನುಭಾವ ಕವಿ, ಸಂತ, ವೈಚಾರಿಕ ಪ್ರಜ್ಞೆಯ ಪ್ರತೀಕ ಶ್ರೀ ಸಿದ್ದರಾಮೇಶ್ವರರ ವಚನದಲ್ಲಿ ಸಮಾಜಮುಖೀ ಆಲೋಚನೆ, ಜೀವನ್ಮುಖೀ ಸಂಗತಿ ಅಡಗಿವೆ. ಬಸವಾದಿ ಶರಣರಲ್ಲಿ ಶ್ರೀ ಸಿದ್ದರಾಮೇಶ್ವರರು ಇವರು ಸದಾ ಭಿನ್ನ ಧ್ವನಿ ಎತ್ತುತ್ತಿದ್ದಂತಹ ಹಠಯೋಗಿ.

Advertisement

ಹೆಣ್ಣು ಸಾಕ್ಷಾತ್‌ ಕಪಿಲ ಸಿದ್ದರಾಮ ಮಲ್ಲಿಕಾರ್ಜುನ… ಎನ್ನುವ ಮೂಲಕ 12ನೇ ಶತಮಾನದಲ್ಲಿ ಮಹಿಳೆಯರಿಗೆ ಸಮಾನತೆ, ಅತ್ಯುನ್ನತ ಸ್ಥಾನಮಾನ ನೀಡಿದವರು ಎಂದು ತಿಳಿಸಿದರು. ಸೊಲ್ಲಾಪುರದ ಸುತ್ತಮುತ್ತ ಕೆರೆ- ಕಟ್ಟೆ,ನಾಲೆ ಕಟ್ಟಿಸುವ ಮೂಲಕ ಲೌಕಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಂತಹ ಶ್ರೀ ಸಿದ್ದರಾಮೇಶ್ವರರು  ಅಲ್ಲಮಪ್ರಭುವಿನ ಪ್ರೇರಣೆ ಮತ್ತು ಒತ್ತಾಯದ ಮೇರೆಗೆ ಅನುಭವ ಮಂಟಪಕ್ಕೆ ಆಗಮಿಸಿದರು. 

ಮಾನಸಿಕವಾಗಿ ಬೇರೂರಿದ್ದಂತಹ ಕಂದಾಚಾರ, ಮೌಡ್ಯ, ಭಾವ ದಾರಿದ್ರವನ್ನು ತಮ್ಮ ಸದ್ವಿಚಾರದ ವಚನಗಳ ಮೂಲಕ ದೂರ ಮಾಡುವಂತಹ ಪ್ರಯತ್ನ ಮಾಡಿದರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಣ್ಣ ಚನ್ನಬಸವಣ್ಣರೊಡಗೂಡಿ ಅನುಭವ ಮಂಟಪದ ಪ್ರಮುಖ ಪಂಚಗಣಾಧೀಶರಾಗಿ ದೇದೀಪ್ಯಮಾನವಾಗಿ  ಬೆಳಗಿದರು ಎಂದು ಸ್ಮರಿಸಿದರು. ಶ್ರೀ ಸಿದ್ದರಾಮೇಶ್ವರರ ವಚನಗಳು 12ನೇ ಶತಮಾನವಲ್ಲ ಈಗಿನ ಕ್ಷಣಕ್ಕೂ ಪ್ರಸ್ತುತವಾಗಿವೆ.

ಬದುಕಿನ ಮೀಮಾಂಸೆಯ  ಸಾಹಿತ್ಯ ನೀಡಿರುವಂತಹ ಬಸವಾದಿ ಶರಣರಲ್ಲಿಡೋಹಾರ ಕಕ್ಕಯ್ಯ, ಮಾದಾರ ಚನ್ನಯ್ಯ, ಸತ್ಯಕ್ಕ,  ಆಯ್ದಕ್ಕಿ ಲಕ್ಕವ್ವ, ಸೂಳೆ ಸಂಕವ್ವನಂತಹವರು ಜಾತಿ, ಲಿಂಗ, ಭಾಷಾ, ಸಂವೇದನವನ್ನು ದೂರ ಮಾಡಿದಂತಹವರು. ಪ್ರಜ್ಞಾವಂತಿಕೆಯ ವಿರುದ್ಧ ಸಾತ್ವಿಕ ಹೋರಾಟ ನಡೆಸಿದವರು. ಅವರಲ್ಲಿ ಶ್ರೀ ಸಿದ್ದರಾಮೇಶ್ವರರು ಅಗ್ರಗಣ್ಯರಾಗಿದ್ದಾರೆ.

ಲೌಕಿಕ, ಆಧ್ಯಾತ್ಮಿಕ ಲೋಕಕ್ಕೆ ಮಹತ್ತರ ಕಾಣಿಕೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಶ್ರೀ ಸಿದ್ದರಾಮೇಶ್ವರರು ಸದಾ ಜೀವಸೃಷ್ಟಿ, ಅರಿವಿನ ಪ್ರಜ್ಞೆ ಎತ್ತಿ ಹಿಡಿಯುವಂತಹ ವಚನ ಸಾಹಿತ್ಯ ನೀಡಿದವರು. ಎಲ್ಲದಕ್ಕಿಂತಲೂ ಮೊದಲು ಮನಸ್ಸು ಕಟ್ಟುವ ಕೆಲಸ ಮಾಡಿದರು. ಸಮಾಜಮುಖೀ, ಜಂಗಮ ಮುಖೀಯಾಗಿದ್ದಂತಹ ಬಸವಣ್ಣನವರ ಬಗ್ಗೆ ಅಪಾರ ಪೀÅತಿ, ಗೌರವ ಹೊಂದಿದ್ದರು. 

ಅವರ ವಚನಗಳಲ್ಲಿನ ಜೀವನ ಸಂದೇಶವನ್ನು ಅರ್ಥ ಮಾಡಿಕೊಂಡು ಆ ಬೆಳಕಲ್ಲಿ ಸಾಗುವ ಮೂಲಕ ಪರಿಪೂರ್ಣ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಆಶಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ್‌ಕುರ್ಕಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಇತರರು ಇದ್ದರು. ಸುಮತಿ ಜಯ್ಯಪ್ಪ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next