Advertisement

ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿ-ನ್ಯಾ| ಸಂತೋಷ ಹೆಗ್ಡೆ

02:59 PM Sep 20, 2024 | Team Udayavani |

ಉದಯವಾಣಿ ಸಮಾಚಾರ
ಧಾರವಾಡ: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಮಾಜದಲ್ಲಿನ ಮಾನವೀಯ ಮೌಲ್ಯಗಳ ಕುಸಿತ ಕಾರಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ ಹೆಗ್ಡೆ ಹೇಳಿದರು.

Advertisement

ನಗರದಲ್ಲಿ ಆಲ್‌ ಇಂಡಿಯಾ ಡೆಮೊಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌(ಎಐಡಿವೈಒ) ವತಿಯಿಂದ ಹಮ್ಮಿಕೊಂಡಿದ್ದ “ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ’ ಎಂಬ ವಲಯ ಮಟ್ಟದ ಯುವಜನರ ಸಂಕಲ್ಪ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ತಪ್ಪು ಯಾರೇ ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಕೋರ್ಟ್‌ಗಳಲ್ಲಿ ವಿಚಾರಣೆ ನಡೆದು ಶಿಕ್ಷೆ ಆಗುವುದು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ತೀರ್ಪು ಹೊರಬರುವಷ್ಟರಲ್ಲಿ ಆರೋಪಿಯೇ ಸತ್ತು ಹೋಗಿರುತ್ತಾನೆ. ಇದರಿಂದ ಅಪರಾಧ ಮಾಡುವವರಿಗೆ ಭಯವಿಲ್ಲವಾಗಿದೆ. ನಮ್ಮ ಯುವಕರು ಹಿರಿಯರು ಕಟ್ಟಿ ಬೆಳೆಸಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅಪರಾಧಗಳೇ ಇಲ್ಲದ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಹಿಂದೆ ತಪ್ಪು ಮಾಡಿ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನು ಸಮಾಜ ಬಹಿಷ್ಕಾರ ಮಾಡುತ್ತಿತ್ತು. ಅವರಿಗೆ ಸಾಮಾಜಿಕ ಶಿಕ್ಷೆ ಆಗುತ್ತಿತ್ತು. ಆದರೆ ಅವರನ್ನು ಇಂದು ಸನ್ಮಾನ ಮಾಡುವ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ. ಶ್ರೀಮಂತಿಕೆಯನ್ನು ಪೂಜಿಸುವ ಹಂತಕ್ಕೆ ಸಮಾಜ ಒಂದು ನಿಂತಿದ್ದು, ಪ್ರಾಮಾಣಿಕರನ್ನು ಹುಚ್ಚನೆಂದು ಕರೆಯಲಾಗುತ್ತಿದೆ ಎಂದು ಹೇಳಿದರು.

ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಡಾ| ಜಿ.ಶಶಿಕುಮಾರ್‌ ಮಾತನಾಡಿ, ಯುವಕರಲ್ಲಿ ಮಾನಸಿಕ ಸ್ಥೈರ್ಯ ಹಾಗೂ ವೈಚಾರಿಕತೆ ಬೆಳೆಸಲು ಈ ರೀತಿಯ ಸಮಾವೇಶ ಸಂಘಟಿಸಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಐಡಿವೈಒ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಗಾಳ್‌ ಮಾತನಾಡಿ, ಕೇವಲ ಪ್ರತಿಭಟಿಸಿದರೆ ಸಾಲದು. ಸಮಸ್ಯೆಗಳ ಮೂಲ ಕಾರಣದ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದರು. ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಅಲ್ದಳ್ಳಿ ಇದ್ದರು.

Advertisement

ಭ್ರಷ್ಟಾಚಾರ ಹಾಗೂ ಕಾನೂನು ಉಲ್ಲಂಘನೆ ಮಾಡುವವರನ್ನು ಹೊತ್ತು ಮೆರೆಸುವ ಸಂಸ್ಕೃತಿ ನಿಜಕ್ಕೂ ಬಹಳ ಅಪಾಯಕಾರಿ. ಲೋಕಾಯುಕ್ತಕ್ಕೆ ನಾನು ನೇಮಕಗೊಂಡ ಮೇಲೆ ಭ್ರಷ್ಟಾಚಾರದ ವಿರಾಟ ದರ್ಶನವಾಯಿತು. ಅಲ್ಲಿಯವರೆಗೆ ಬಾವಿ ಕಪ್ಪೆಯಂತಿದ್ದೆ ಎಂದೆನಿಸಿತು. ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಮಾಜ ಎತ್ತ ಸಾಗುತ್ತಿದೆ ಎಂದು ಆತಂಕವಾಗುತ್ತದೆ.
ನ್ಯಾ| ಸಂತೋಷ ಹೆಗ್ಡೆ, ನಿವೃತ್ತ ಲೋಕಾಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next