Advertisement

ವಿದ್ಯಾವಂತರು ಜಾತಿ ಬಿಟ್ಟು ಆಚೆಗೇ ಬರುತ್ತಿಲ್ಲ :- ಸಿದ್ದರಾಮಯ್ಯ

12:51 PM Oct 10, 2021 | Team Udayavani |

ಮೈಸೂರು: ಪ್ರತಿಭಟನಾ ಸ್ವಭಾವದವರಲ್ಲದ ವಿಶ್ರಾಂತ ಕುಲಪತಿ ಎಚ್‌.ಜೆ.ಲಕ್ಕಪ್ಪಗೌಡರು ಅಜಾತ ಶತ್ರುವಿನಂತಿದ್ದರಲ್ಲದೇ ಯಾರ ಮನಸ್ಸು ನೋಯಿಸದ ಕರ್ಮಯೋಗಿಯಾಗಿದ್ದರು ಎಂದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು. ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿಶನಿವಾರ ಏರ್ಪಡಿಸಿದ್ದ ಡಾ.ಎಚ್‌.ಜಿ.ಲಕ್ಕಪ್ಪಗೌಡರ ನುಡಿನ ನಮನ ಕಾರ್ಯಕ್ರಮದಲ್ಲಿ ಲಕ್ಕಪ್ಪಗೌಡರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು.

Advertisement

ಕುವೆಂಪು ಸಾಹಿತ್ಯದ ಪ್ರಭಾವಕ್ಕೆ ಒಳಗಾದ ಲಕ್ಕಪ್ಪ ಗೌಡರು ತಾವೇ ಸಾಹಿತಿಯಾಗಿ ಬೆಳೆದರು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಕುರಿತು 18 ವರ್ಷಗಳ ಅಧ್ಯಯನ ನಡೆಸಿ ವಿಮರ್ಶಾ ಪ್ರಬಂಧ ಬರೆದು ಡಾಕ್ಟರೆಟ್‌ ಪಡೆದುಕೊಂಡರು.  ನಾನು ರಾಜಕೀಯ ಪ್ರವೇಶಿಸಿದ ದಿನದಿಂದಲೂ ಲಕ್ಕಪ್ಪಗೌಡರೊಂದಿಗೆ ಒಡನಾಡ ಇತ್ತು ಎಂದು ಸ್ಮರಿಸಿದರು. ಕುವೆಂಪು ಅವರ ಸಾಹಿತ್ಯ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವದಿಂದ ಕೂಡಿದೆ. ವೈಜ್ಞಾನಿಕ ಮನೋಭಾವ ಬೆಳಸದ ಶಿಕ್ಷಣ ಕಲಿತರೆ ಪ್ರಯೋ ಜನವೇನು? ಜ್ಞಾನ ವಿಕಾಸವಾಗದ ಓದು ಬರಹ ಬಂದರೇನು ಎಂದು ಪ್ರಶ್ನಿಸಿ, ಇಂದು ಪಿಎಚ್‌.ಡಿ,ಎಂಜಿನಿಯರಿಂಗ್‌, ಡಾಕ್ಟರ್‌ ಓದಿದವರು, ವಿಜ್ಞಾನಿಗಳಾದವರು ಜಾತಿ ಬಿಟ್ಟು ಆಚೆಗೇ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:- ಉತ್ತರ ಕರ್ನಾಟಕದಲ್ಲೂ ಮೈಸೂರು ದಸರೆಯ ವೈಭವ ಸಾರುವ ಬೊಂಬೆ ಪ್ರದರ್ಶನ

ಪ್ರತಿಯೊಬ್ಬರಲ್ಲೂ ದೇವರಿದ್ದಾನೆಂದು ಬಸವಾದಿ ಶರಣರು ಹೇಳಿದ್ದಾರೆ. ಆದರೆ ದೇವರು, ಧರ್ಮದ ಹೆಸರಿನಲ್ಲಿ ಮತ್ತೂಂದು ಧರ್ಮವನ್ನು ಅಸಹ್ಯವಾಗಿ ನಡೆಸಿಕೊಳ್ಳುವುದು ಖಂಡನೀಯ. ತುರ್ತು ಸ್ಥಿತಿಯಲ್ಲಿದ್ದ ವ್ಯಕ್ತಿ ಬದುಕಲು ಯಾವ, ಜಾತಿ, ಧರ್ಮದ ವ್ಯಕ್ತಿಯ ರಕ್ತವಾದರೂ ಆಗುತ್ತದೆ. ಆಸ್ಪತ್ರೆ ಹೊರ ಬಂದ ಮೇಲೆ ನೀನು ಸಿಖ್‌, ಮುಸ್ಲಿಂನೆಂದು ವಿಂಗಡಿಸುವುದು ಸ್ವಾರ್ಥವಲ್ಲವೇ ಎಂದರು.

ವೈಯಕ್ತಿಕ ಟೀಕೆ ಬೇಡ: ಧರ್ಮಕೋಸ್ಕರ ಮನುಷ್ಯ ಅಲ್ಲ. ಮನುಷ್ಯನಿಗೋಸ್ಕರ ಧರ್ಮ ಇದೆ. ಇನ್ನೊಬ್ಬರಿಗೆ ಕೇಡು ಬಯಸದಿರುವುದೇ ಧರ್ಮ. ಅದನ್ನು ನಂಬಿದರೆ ಸಾಕು. ಟೀಕೆಗಳೂ ಸಕಾರಾತ್ಮಕವಾಗಿದ್ದ ಮಾತ್ರ ಒಳ್ಳೆಯದು. ಆಧಾರ ರಹಿತವಾಗಿ ಯಾರ ಬಗ್ಗೆಯೂ ಟೀಕೆ ಮಾಡಬಾರದು. ವೈಯಕ್ತಿಯ ಟೀಕೆ ಅಗತ್ಯವೇ ಇಲ್ಲ. ಸಮಾಜ, ಜನರ ಹಿತದೃಷ್ಟಿ ಟೀಕೆಗಳು ಒಳ್ಳೆಯದು ಎಂದು ತಿಳಿಸಿದರು.

Advertisement

ಪ್ರತಿಷ್ಠಾನ ಸ್ಥಾಪಿಸಿ: ನಿವೃತ್ತ ಪ್ರಾಧ್ಯಾಪಕ ಎನ್‌.ಎಂ. ತಳವಾರ ಮಾತನಾಡಿ, ಲಕ್ಕಪ್ಪಗೌಡರ ಬದುಕು ಸಾಹಿತ್ಯ ಕುರಿತು ನಿರೀಕ್ಷಿತ ಮಟ್ಟದ ಅಧ್ಯಯನ, ಚರ್ಚೆ ನಡೆದಿಲ್ಲ. ಕರ್ನಾಟಕ ಪುಸ್ತಕ ಪ್ರಾಧಿಕಾರ ಲಕ್ಕಪ್ಪಗೌಡರ ಸಮಗ್ರ ಸಾಹಿತ್ಯ ಪ್ರಕಟಿಸಬೇಕು. ಲಕ್ಕಪ್ಪಗೌಡರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಪ್ರತಿ ವರ್ಷ ಸಮಾರಂಭ ಆಯೋಜಿಸಬೇಕು. ಅದಕ್ಕಾಗಿ ದೇಣಿಗೆ ಸಂಗ್ರಹಿಸುವುದಾದರೆ ತಾವೇ ಮೊದಲಿಗರಾಗಿ ದೇಣಿಗೆ ನೀಡುತ್ತೇವೆ ಎಂದರು.

ಲಕ್ಷ ರೂ.ದತ್ತಿ: ಲಕ್ಕಪ್ಪಗೌಡರ ಅಳಿಯ ಜಯದೇವ ಆಸ್ಪತ್ರೆ ವೈದ್ಯ ಡಾ.ಬಿ.ದಿನೇಶ್‌ ಮಾತನಾಡಿ, ಹಂಪಾಪುರದಿಂದ ಹಂಪಿವರೆಗೆ ಬೆಳೆದ ಲಕ್ಕಪ್ಪಗೌಡರ ಸಾಧನೆ ದೊಡ್ಡದು. ಅವರ ಹೆಸರು ಶಾಶ್ವತಗೊಳಿಸುವ ದಿಸೆಯಲ್ಲಿ ಜಾನಪದ, ಕಲೆ, ಸೃಜನಶೀಲ ಸಾಹಿತ್ಯದಲ್ಲಿ ಕೆಲಸ ಮಾಡಿದವರಿಗೆ ಪ್ರಶಸ್ತಿ ನೀಡುತ್ತೇವೆ. ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 1 ಲಕ್ಷ ದತ್ತಿ ಇಡುವುದಾಗಿ ಪ್ರಕಟಿಸಿದರು.

ಹಿಂದೆ 70 ವರ್ಷ ಮೇಲ್ಪಟ್ಟ ತಂದೆಯನ್ನು ಮಕ್ಕಳು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಇವತ್ತು ಮಕ್ಕಳನ್ನು ತಂದೆ ಆಸ್ಪತ್ರೆಗೆ ಕರೆತರುವ ಪರಿಸ್ಥಿತಿ ಇದೆ. ಬದಲಾದ ಆಚಾರ-ವಿಚಾರ, ಆಹಾರ ಪದ್ಧತಿ, ಒತ್ತಡ ಕಾರಣಗಳಾಗಿವೆ. ಇದು ಅಪಾಯಕಾರಿ. ಕೊರೊನಾ ಇರುವುದು ವಾಸ್ತವ. ಅದರೊಂದಿಗೆ ಎಚ್ಚರಿಕೆಯಿಂದ ಬದುಕಬೇಕಿದೆ ಎಂದು ಹೇಳಿದರು. ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್‌.ಬಾಲಾಜಿ, ಜಾನಪದ ತಜ್ಞ ಪ್ರೊ.ಹಿ.ಸಿ. ರಾಮಚಂದ್ರೇಗೌಡ, ಶಾಸಕ ಎಚ್‌.ಪಿ. ಮಂಜುನಾಥ್‌,ಕನ್ನಡ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಚಿಕ್ಕಣ್ಣ, ಲೇಖಕ ಮಾನಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next