ಬೆಂಗಳೂರು: ಆಗಸ್ಟ್ 11ರಂದು ಸಂಜೆ 7.45ಕ್ಕೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಆಗಲೇ ಎಫ್ ಐಆರ್ ಮಾಡಿಕೊಳ್ಳಬೇಕಿತ್ತು. ಆದರೆ ಎಫ್ ಐಆರ್ ಮಾಡಿಕೊಂಡಿಲ್ಲ. ಅದು ಇಷ್ಟು ದೊಡ್ಡ ಗಲಭೆಗೆ ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಗಲಭೆ ನಡೆದ ಡಿಜೆ ಹಳ್ಳಿಗೆ ಭೇಟಿ ನೀಡಿದ ಅವರು ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಆಗಸ್ಟ್ 11 ರಂದು ಡಿಜೆಹಳ್ಳಿ ಗಲಭೆ ನಡೆದಿದೆ. ಆಗ ನಾನು ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿದ್ದೆ. ಏನಾಗಿದೆ ಎನ್ನುವುದು ಸರಿಯಾಗಿ ಗೊತ್ತಿರಲಿಲ್ಲ ಎಂದು ತಮ್ಮ ಭೇಟಿಯ ಉದ್ದೇಶದ ಬಗ್ಗೆ ಹೇಳಿದರು.
ಘಟನೆಯ ಬಗ್ಗೆಈಗ ಮ್ಯಾಜಿಸ್ಟ್ರೇಟ್ ತನಿಖೆ ಮಾಡ್ತಿದ್ದಾರೆ. ಆದರೆ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲೇ ತನಿಖೆಯಾಗಬೇಕು. ಇದೇ ನಮ್ಮಒತ್ತಾಯ, ಇದರಿಂದ ಹಿಂದೆ ಸರಿಯಲ್ಲ. ಸದನದಲ್ಲಿ ಇದರ ಬಗ್ಗೆ ಜೋರು ಮಾಡಿಯೇ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಡ್ರಗ್ಸ್ ಮಾಫಿಯಾ ತಡೆಗಟ್ಟಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ: ಪ್ರವೀಣ್ ಸೂದ್
ಯಾರೇ ತಪ್ಪಿದ್ದರೆ ಶಿಕ್ಷೆಯಾಗಲಿ. ಪೊಲೀಸರು 324 ಜನರನ್ನು ಬಂಧಿಸಿದ್ದಾರೆ. ಅದರಲ್ಲಿ ಕೆಲವರು ಅಮಾಯಕರು ಎಂದು ರಿಜ್ವಾನ್ ಹೇಳ್ತಿದ್ದಾರೆ. ಅಂತವರಿದ್ದರೆ ಅವರನ್ನು ಬಿಡಬೇಕು. ತಪ್ಪು ಮಾಡಿದವರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಲಿ ಎಂದರು.
ಘಟನೆಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಕೈವಾಡವೆಂಬ ವಿಚಾರಕ್ಕೆ ಮಾತನಾಡಿದ ಅವರು ಕಾಂಗ್ರೆಸ್ ಕಾರ್ಪೋರೇಟರ್ ಇದ್ದಾರೆ ಎಂದು ಏನಾದರೂ ತನಿಖೆಯಲ್ಲಿ ಗೊತ್ತಾಗಿದೆಯೇ? ಹಾಗೇನಾದರೂ ಇದ್ದರೆ ಶಿಕ್ಷೆ ಕೊಡಲಿ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ತನಿಖೆಗೂ ಮುನ್ನವೇ ಹೇಳುವುದಕ್ಕೆ ನಾನು ಬಿಜೆಪಿಯವರಲ್ಲ ಎಂದರು.