ವಿಜಯಪುರ : ”ಸಿ.ಎಂ. ಬಸವರಾಜ ಬೊಮ್ಮಾಯಿ ಕುರಿ ಕಾಯ್ದಿದ್ದು ಎಲ್ಲಿ, ಮಾಜಿ ಸಿ.ಎಂ. ಕುಮಾರಸ್ವಾಮಿ ಯಾವ ಕುರಿ ಮಂದೆಯಲ್ಲಿ ಮಲಗಿದ್ದರು ಹೇಳ್ರಪ್ಪ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಮತ್ತೆ ಪ್ರಶ್ನಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ”ಇಷ್ಟಕ್ಕೂ ಕಂಬಳಿಯನ್ನು ರಾಜಕೀಯಕ್ಕೆ ತಂದದ್ದು ನಾನಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ” ಎಂದರು.
”ನಾನು ಕಂಬಳಿ ನೇಯ್ದಿಲ್ಲ, ಆದ್ರೆ ಕುರಿ ಉಣ್ಣೆ ಮಾರಿದ್ದೇನೆ . ಕುಮಾರಸ್ವಾಮಿ ಕುರಿ ಮಂದೆಯಲ್ಲಿ ಎಲ್ಲಿ ಮಲಗಿದ್ರು, ಅಷ್ಟೋತ್ತಿಗೆ ಅವರ ತಂದೆ ಎಂಎಲ್‍ಎ ಆಗಿದ್ದರು, ಆವಾಗ ಇವರು ಕುರಿ ಮಂದೆಯಲ್ಲಿ ಹೇಗೆ ಮಲಗುತ್ತಾರೆ. ಕುಮಾಸ್ವಾಮಿ ದೊಡ್ಡ ಸುಳ್ಳುಗಾರ, ಅವನ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದರು.
ಉಪ ಚುನಾವಣೆಯಲ್ಲಿ ”ಬಿಜೆಪಿ ಪರ ಸುನಾಮಿ” ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದನ್ನು ತೀಕ್ಷಣವಾಗಿ ಕುಟುಕಿದ ಸಿದ್ಧರಾಮಯ್ಯ, ”ಮೋದಿ ಅವರ ಜನ ವಿರೋಧಿ ಕೆಲಸ, ಬಿಜೆಪಿ ಆಡಳಿತಕ್ಕೆ ಜನ ಬೇಸತ್ತಿರುವ ಜನರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳಿಗೆ ಶಾಪ ಹಾಕುತ್ತಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ರಮೇಶ ಭೂಸನೂರು ಮಾಡಿದ ಸಾಧನೆ ಏನೂ ಇಲ್ಲ. ಹೀಗಾಗಿ ಕಾಂಗ್ರೆಸ್ ಪರವಾದ ಅಲೆ ಕಾಣಿಸಿಕೊಂಡಿದೆ” ಎಂದರು.
”ಸಿಂದಗಿ ಹಾಗೂ ಹಾನಗಲ್ ವಿಧಾನಸಭೆಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ನಮ್ಮ ಪರವಾದ ಬೆಂಬಲ ಹಾಗೂ ಸ್ಪಂದನೆ ಸಿಕ್ಕಿದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿಜಯ ಖಚಿತವಾಗಿದೆ. ಹಳ್ಳಿ-ಪಟ್ಟಣಗಳಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಬಿಜೆಪಿ ಬಳಿ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನಿಲ್ಲ, ಜೆಡಿಎಸ್ ಸ್ಪರ್ಧೆಯಲ್ಲೆ ಇಲ್ಲ, ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
”ತನಿಖಾಧಿಕಾರಿಗಳು ಡ್ರಗ್ಸ್ ಕೇಸ್ ಮುಚ್ಚಿ ಹಾಕುತ್ತಿದ್ದಾರೆ ಎಂಬ ಭಾವನೆ ಬರುವಂತೆ ನಡೆದುಕೊಳ್ಳಬಾರದು. ಇದರಲ್ಲಿ ಭಾಗಿಯಾಗಿರುವರನ್ನು ಹೊರಗೆ ಎಳೆಯಬೇಕು. ಕೇಸ್ ಇನ್ನೂ ಕ್ಲೋಸ್ ಆಗಿಲ್ಲ, ಯಾರಿಗೂ ರಕ್ಷಣೆ ಕೊಡುವ ಕೆಲಸ ಆಗಬಾರದು” ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.