Advertisement

ಸಿದ್ದರಾಮಯ್ಯ ಮೌನವೃತ ಪರಿಣಾಮ ಕಾರ್ಯಸೂಚಿ ಸ್ಟ್ರಕ್‌!​​​​​​​

06:00 AM Sep 09, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಾದರೂ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಗೊಂಡಿಲ್ಲ.

Advertisement

ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಕರಡು ಸಿದ್ಧವಾಗುತ್ತಿದೆ ಎಂದು ಎರಡು ತಿಂಗಳಿನಿಂದ ಹೇಳಲಾಗುತ್ತಿದೆಯಾದರೂ ಅದು ಎಲ್ಲಿಯವರೆಗೆ ಬಂತು ಎಂಬುದೂ ಗೊತ್ತಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಅಂತಿಮಗೊಳಿಸುವ ಗೋಜಿಗೂ ಹೋಗಿಲ್ಲ.

ಹೀಗಾಗಿ, ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಇಲ್ಲದೆಯೇ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಮೂರು ತಿಂಗಳು ಪೂರೈಸಿದೆ. ಸದ್ಯ ಈ ಕುರಿತು ಯೋಚಿಸುವ ಸ್ಥಿತಿಯಲ್ಲಿ ಮೈತ್ರಿ ಪಕ್ಷಗಳ ನಾಯಕರೂ ಇದ್ದಂತಿಲ್ಲ. ಚುನಾವಣಾ ಪೂರ್ವದಲ್ಲಿ ಉಭಯ ಪಕ್ಷಗಳು ನೀಡಿದ್ದ ಪ್ರಣಾಳಿಕೆ ಆಧಾರದ ಮೇಲೆ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಗೊಂಡು, ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಯಾವ್ಯಾವ ಕಾರ್ಯಕ್ರಮಗಳು ಆದ್ಯತೆ ಮೇರೆಗೆ ಜಾರಿಗೊಳಿಸಬೇಕು ಎಂಬುದು ತೀರ್ಮಾನವಾಗಬೇಕಿತ್ತು. ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನವಾದ ನಂತರ ಸಂಪುಟದಲ್ಲಿ ಅನಮೋದನೆ ಪಡೆದು ಆದೇಶ ಹೊರಡಿಸಿ ಅನುಷ್ಟಾನಗೊಳಿಸಬೇಕಿತ್ತು. ಆದರೆ, ಇದ್ಯಾವುದೂ ಆಗುತ್ತಿಲ್ಲ.

ಕೈ ಶಾಸಕರ ಅಸಮಾಧಾನ:
ಈ ನಿರಾಸಕ್ತಿ ಕಾಂಗ್ರೆಸ್‌ ಶಾಸಕರ ಅಸಮಾಧಾನಕ್ಕೂ ಕಾರಣವಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಸೂಚಿಯೇ ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರ ಕಾರ್ಯನಿರ್ವಹಿಸುವುದು ಹೇಗೆ? ಸಮನ್ವಯತೆ ಸಾಧಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತಿವೆ.

ಈ ನಡುವೆ ಸಮ್ಮಿಶ್ರ ಸರ್ಕಾರದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ, ಮಾಸಾಶನ ಸೇರಿ ಜೆಡಿಎಸ್‌ನ ಪ್ರಣಾಳಿಕೆಯ ಕೆಲ  ಕಾರ್ಯಕ್ರಮಗಳನ್ನು ಜಾರಿಯಾಗುವಂತೆ ನೋಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯಾವೊಂದೂ ಕಾರ್ಯಕ್ರಮ ಘೋಷಣೆಯಾಗಿಲ್ಲ. ಹಿಂದಿನ ಸರ್ಕಾರದಲ್ಲಿ ಆರಂಭಿಸಿದ್ದ ಕೆಲವೊಂದು  ಕಾರ್ಯಕ್ರಮಗಳು ಮಾತ್ರ ಮುಂದುವರಿದಿರುವುದು ಬಿಟ್ಟರೆ ಬೇರೆ ಯಾವುದೂ ಹೊಸದಾಗಿ ಸೇರ್ಪಡೆಯಾಗಿಲ್ಲ. ಅನ್ನಭಾಗ್ಯ ಯೋಜನೆಯಡಿ  ಏಳು ಕೆಜಿ ಅಕ್ಕಿ ಮುಂದುವರಿಸುವ ಸಂಬಂಧದ ಗೊಂದಲ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ.

Advertisement

ಸದಸ್ಯರ ನೇಮಕ:
ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಸಿದ್ಧಗೊಳಿಸಲು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಸದಸ್ಯರನ್ನು ನೇಮಿಸಲಾಗಿತ್ತು. ಜೆಡಿಎಸ್‌ನಿಂದ  ಎಚ್‌.ಡಿ.ರೇವಣ್ಣ, ಬಂಡೆಪ್ಪ ಕಾಶಂಪುರ್‌, ಕಾಂಗ್ರೆಸ್‌ನಿಂದ ವೀರಪ್ಪ ಮೊಯಿಲಿ, ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌ ಸದಸ್ಯರಾಗಿದ್ದರು. ಇವರು ಸಭೆ ಸೇರಿ ಕರಡು ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದುವರೆಗೂ ಅಂತಿಮ ಸ್ವರೂಪ ಪಡೆದಿಲ್ಲ.

ಹೈಕಮಾಂಡ್‌ಗೆ ದೂರು
ಸಮನ್ವಯ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ ರಾಜ್ಯಾಧ್ಯಕ  ಎಚ್‌.ವಿಶ್ವನಾಥ್‌ ಸೇರ್ಪಡೆಯಾಗುವುದು ವಿಳಂಬವಾಗುತ್ತಿರುವುದಕ್ಕೂ ಎರಡೂ ಪಕ್ಷದ ವಲಯದಲ್ಲಿ ಅಸಮಾಧಾನವಿದೆ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಸಮಿತಿಯಲ್ಲಿ ಇದ್ದಾಗ ಮಾತ್ರ ಪ್ರಣಾಳಿಕೆಯ ವಿಚಾರ ಅನುಷ್ಟಾನ ಸಂಬಂಧ ಚರ್ಚೆ ಆಗುತ್ತದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ಆಡಳಿತದ ಹೊಣೆಗಾರಿಕೆ ನೋಡಿಕೊಳ್ಳುತ್ತಾರೆ. ಆದರೆ, ಎರಡೂ ಪಕ್ಷಗಳ ಕಾರ್ಯಕ್ರಮಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕಾದುದು ಪಕ್ಷದ ಅಧ್ಯಕ್ಷರು. ಅವರೇ ಸಮನ್ವಯ ಸಮಿತಿಯಲ್ಲಿ ಇಲ್ಲ. ಸರ್ಕಾರಕ್ಕೆ 100 ದಿನ ಕಳೆದರೂ ಪ್ರತಿ ತಿಂಗಳು ಸಮನ್ವಯ ಸಮಿತಿ ಸಭೆ, ಸಾಮಾನ್ಯ ಕಾರ್ಯಸೂಚಿ ಸಿದ್ಧಪಡಿಸುವಿಕೆ ವಿಚಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕೆಲವು ಶಾಸಕರು ಹೈಕಮಾಂಡ್‌ಗೂ ದೂರು ಮುಟ್ಟಿಸಿದ್ದಾರೆ ಎಂದು ಹೇಳಲಾಗಿದೆ.

ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಯಾವುದೇ ಒಂದು ಸಮ್ಮಿಶ್ರ ಸರ್ಕಾರದ “ಸಂವಿಧಾನ’ ಇದ್ದಂತೆ. ಅದು  ಈಗಾಗಲೇ ಆಗಬೇಕಿತ್ತು ನಿಜ. ಆದಷ್ಟು ಬೇಗ ಆ ಬಗ್ಗೆ ಗಮನಹರಿಸಲಾಗುವುದು.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಕರಡು ಪ್ರತಿ ಸಿದ್ಧವಾಗುತ್ತಿದೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಅಂತಿಮ ಸ್ವರೂಪ ನೀಡಲಾಗುವುದು.
– ದಿನೇಶ್‌ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next