ಬೆಂಗಳೂರು: “ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ವೈಫಲ್ಯ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕಾರಣರಾಗಿದ್ದು, ಅವರೇ ಹೇಳಿದಂತೆ 12 ಸ್ಥಾನ ಗೆಲ್ಲಲಿದ್ದಾರೆಯೇ’ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ಆರೋಪಿಸುವ ಮೊದಲು ಮೈತ್ರಿ ಸರ್ಕಾರ ಪತನಗೊಂಡಿದ್ದೇಕೆ ಎಂಬ ಬಗ್ಗೆ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರವನ್ನು ಒಪ್ಪಿಕೊಂಡಿರಲೇ ಇಲ್ಲ. ಮೈತ್ರಿ ವೈಫಲ್ಯದಿಂದ ಬೇಸತ್ತು 17 ಶಾಸಕರು ರಾಜೀನಾಮೆ ನೀಡಿದರು. ಈ ಸತ್ಯ ತಿರುಚುವ ಇಲ್ಲವೇ ದಾರಿ ತಪ್ಪಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗದು. ಹೀಗಾಗಿ ಮೈತ್ರಿ ಪತನವಾಗಲು ಬಿಜೆಪಿ ಕಾರಣವಲ್ಲ ಎಂದು ಹೇಳಿದರು.
ಸೋಲಿನ ಹೊಣೆ ಹೊರುತ್ತಾರಾ?: ಸಿದ್ದರಾಮಯ್ಯ ಅವರೇ ಉಪಚುನಾವಣೆ ಎದುರಾಗಲು ಕಾರಣವಾಗಿದ್ದು ಇದೀಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಉಪಚುನಾವಣೆ ಯಲ್ಲಿ 12 ಸ್ಥಾನ ಗೆಲ್ಲುವುದಾಗಿ ಸಿದ್ದರಾಮಯ್ಯ ಹೇಳಿದ್ದು, ಅಷ್ಟು ಸ್ಥಾನ ಗೆಲ್ಲದಿದ್ದರೆ ಸೋಲಿನ ಹೊಣೆ ಹೊರುತ್ತಾರೆಯೇ. 12 ಸ್ಥಾನ ಗೆಲ್ಲದಿದ್ದರೆ ಅವರು ಜನರಿಗೆ ಯಾವ ಉತ್ತರ ನೀಡಲಿದ್ದಾರೆ ಎಂದು ಪ್ರಶ್ನಿಸಿದರು.
ಆಧಾರ ರಹಿತ ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಉಪ ಚುನಾವಣೆಗೆ ಪಕ್ಷದ ಕಾರ್ಯಸೂಚಿ ಏನು ಎಂಬುದನ್ನು ಜನರ ಮುಂದಿಡಬೇಕು. ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದು, ಸಿದ್ದರಾಮಯ್ಯ ಅವರೇ ಹೊರತು ಬಿಜೆಪಿಯಲ್ಲ ಎಂಬುದನ್ನು ಅರಿಯಬೇಕೆಂದರು.
ಸಂಘಟನೆಗೆ ಒತ್ತು: ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ಹಾಕಿದರೆ ಸರ್ಕಾರ ರಚನೆ ಆಗಲ್ಲ. ಇನ್ನು ಕಾಂಗ್ರೆಸ್‌ಗೆ ಮತ ನೀಡಿದರೆ ಮಧ್ಯಂತರ ಚುನಾವಣೆಗೆ ಆಹ್ವಾನ ಎಂದೇ ಅರ್ಥ. ಸಿದ್ದರಾಮಯ್ಯ ಅವರು ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೂ ಮಧ್ಯಂತರ ಚುನಾವಣೆ ನಡೆಯಬೇಕು ಎಂಬುದು ಅವರ ಇಚ್ಛೆ. ಸ್ಥಿರ ಹಾಗೂ ಜನಪರ ಸರ್ಕಾರ ಬಿಜೆಪಿಯಿಂದ ಮಾತ್ರ ಸಾಧ್ಯ. ನಾವು 7 ಸ್ಥಾನ ಗೆಲ್ಲಬೇಕಿದ್ದು, ಎಲ್ಲ 15 ಸ್ಥಾನ ಗೆಲ್ಲುತ್ತೇವೆ. ಈಗಾಗಲೇ “ಕೇಡರ್’ ವ್ಯವಸ್ಥೆ ಬಲಪಡಿಸಿ ಸಂಘಟನೆಗೆ ಒತ್ತು ನೀಡಲಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮೂಲ ಸೌಕರ್ಯ ಕೊರತೆ ನಿವಾರಿಸಿ ಭವಿಷ್ಯದ ನಗರವನ್ನಾಗಿ ರೂಪಿಸುವ ಗುರಿ ಸರ್ಕಾರಕ್ಕಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕೇಂದ್ರದಿಂದ ಹೆಚ್ಚಿನ ಅನುದಾನ, ಸಹಕಾರ ಸಿಗಲಿದೆ. ಕೇಂದ್ರ-ರಾಜ್ಯ ಸರ್ಕಾರಗಳು ಡಬಲ್ ಎಂಜಿನ್‌ನಂತೆ ಕಾರ್ಯ ನಿರ್ವಹಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ಉತ್ತಮ ಬಾಂಧವ್ಯವಿದೆ. ಯಾರೇ ತೊಂದರೆಗೆ ಸಿಲುಕಿದರೂ ತಕ್ಷಣ ಸ್ಪಂದಿಸುತ್ತಾರೆಂದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ಉಪಸ್ಥಿತರಿದ್ದರು.