Advertisement
ಈ ಸಂಬಂಧ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೋನಾ ಸಾಂಕ್ರಾಮಿಕವನ್ನು ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಝೂಮ್ ತಂತ್ರಾಂಶದ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆಯಲಾಗಿತ್ತು. ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು, ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿದೆ ಎಂದು ಮುಖ್ಯ ಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Related Articles
ನನಗೆ ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸುವ, ನಿರ್ದೇಶನಗಳನ್ನು ನೀಡುವ ಉದ್ದೇಶವಿಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವು ಇದೆ. ಕೆಲವು ಮಾಹಿತಿ ಪಡೆಯುವುದಷ್ಟೇ ನನ್ನ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆಯನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಆ ನಮೂನೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ ಇದ್ದಾರೆ.
Advertisement
ಕಳೆದ ಎರಡು ವರ್ಷಗಳಿಂದ ನಾವು ಕೇಳಿರುವ ಮಾಹಿತಿಯೊಂದಾದರೆ ಅಧಿಕಾರಿಗಳು ಇನ್ನೊಂದು ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಅದಕ್ಕಾಗಿ ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗಧಿ ಪಡಿಸಿದ್ದೆ. ಖುದ್ದು ಮಾಹಿತಿ ಪಡೆಯುವ ನನ್ನ ಹಕ್ಕನ್ನು ಸರ್ಕಾರವು ನಿರಾಕರಿಸಿರುವುದರಿಂದ ಅದು ಹಕ್ಕು ಚ್ಯುತಿಯಾಗುವುದಿಲ್ಲವೆ? ಜೊತೆಗೆ ನಾನು ಕಳುಹಿಸಿದ್ದ ನಮೂನೆಯಲ್ಲಿ ಕೇವಲ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಾತ್ರ ಮಾಹಿತಿ ಕಳುಹಿಸಿದ್ದಾರೆ. ಉಳಿದವರು ಬೇಜವಾಬ್ಧಾರಿ ವರ್ತನೆ ತೋರಿದ್ದಾರೆ. ಅವರ ವರ್ತನೆಗೆ ಯಾವ ಶಿಕ್ಷೆ ವಿಧಿಸುತ್ತೀರಿ? ಮುಖ್ಯ ಕಾರ್ಯದರ್ಶಿಗಳು ನನಗೆ ಕಳಿಸಿರುವ ಪತ್ರದಲ್ಲಿ 2009 ರ ಸುತ್ತೋಲೆಯನ್ನು ನಮೂದಿಸಿದ್ದಾರೆ. 2009 ರ ಸುತ್ತೋಲೆಯನ್ನು 2016 ರಲ್ಲಿ ಪುನರುಚ್ಛರಿಸಲಾಗಿದೆ ಎಂದು ತಿಳಿಸಲಾಗಿದೆ.
ಆದರೆ ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ಸರ್ಕಾರಕ್ಕೆ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹಾಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಝೂಮ್, ಗೂಗಲ್ ಮುಂತಾದ ಅಪ್ಲಿಕೇಷನ್ನುಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರವೇನೂ ವ್ಯವಸ್ಥೆ ಮಾಡಬೇಕಾಗಿರಲಿಲ್ಲ. ಸರ್ಕಾರ ಇದಿಷ್ಟನ್ನೂ ಅರ್ಥಮಾಡಿಕೊಳ್ಳದ ಸ್ಥಿತಿ ತಲುಪಿದೆ.
ಹಿಂದೆ ನಾನು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗಿ ಬರ ಮುಂತಾದ ವಿಚಾರಗಳ ಕುರಿತು ಖುದ್ದು ಮಾಹಿತಿ ಪಡೆದಿದ್ದರು. ಅದಕ್ಕೆ ನನ್ನ ಸರ್ಕಾರ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಅದೇ ರೀತಿಯಲ್ಲಿ ತಂತ್ರಜ್ಞಾನದ ನೆರವು ಪಡೆದು ಮಾಹಿತಿ ಸಂಗ್ರಹಿಸುವುದನ್ನು ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ಕ್ರಮವು ಸಂವಿಧಾನದ ಹಲವು ಅನುಚ್ಛೇದಗಳ ಪ್ರಕಾರ ಹಕ್ಕುಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಸ್ಪೀಕರ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.