ಬೆಂಗಳೂರು: ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು ಈಗಿನ ಬಿಕ್ಕಟ್ಟು ಶೀಘ್ರವಾಗಿ ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳನ್ನು ಈಗಿನ ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಕಾಲದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜ್ಯ ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆಯ ರಾಜಕೀಯಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಶುಲ್ಕ ಕಡಿತದ ಸರ್ಕಾರಿ ಆದೇಶವನ್ನು ಧಿಕ್ಕರಿಸಿರುವ ಖಾಸಗಿ ಶಾಲೆಗಳ ನಿಲುವಿನ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ಅವರ ಅಸಾಮರ್ಥ್ಯವನ್ನಷ್ಟೇ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಆಟೋವೇ ಅರಮನೆ : ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಆಟೋ ಓಡಿಸಿ ಬದುಕು ಸಾಗಿಸುವ 74 ರ ವೃದ್ಧ
ಕೊರೊನಾ ಹಾವಳಿಯಿಂದ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಷ್ಟ-ನಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡು-ಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿಯವರು, ಶಿಕ್ಷಣ ಸಚಿವರು ಒಂದು ವರ್ಗದ ಹಿತೈಷಿಯಂತೆ ವರ್ತಿಸಬಾರದು ಎಂದು ಕಿವಿಮಾತು ಹೇಳಿದ್ದಾರೆ.