ಬೆಂಗಳೂರು: ವರ್ಗಾವಣೆ ಆರೋಪ ಸಾಬೀತಾದರೆ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಮಾರಸ್ವಾಮಿ ಅವರ ಯಾವುದೇ ಆರೋಪಕ್ಕೂ ದಾಖಲೆಗಳೂ ಇಲ್ಲ, ಆರೋಪವನ್ನು ಸಾಬೀತುಪಡಿಸುವುದೂ ಇಲ್ಲ. ಅವರದ್ದು ಬರೀ ‘ಹಿಟ್ ಆಂಡ್ ರನ್’ ಎಂದು ದೂರಿದರು.
ಇದನ್ನೂ ಓದಿ:World Cup Final: ಹಾರಲಿ ಭಾರತದ ವಿಜಯ ಪತಾಕೆ; ಅಹಮದಾಬಾದ್ ನಲ್ಲಿ ಟಾಸ್ ಗೆದ್ದ ಆಸೀಸ್
ಹೊಟ್ಟೆಯುರಿಯಿಂದ ಕುಮಾರಸ್ವಾಮಿ ಹೀಗೆ ಬೇಕಾಬಿಟ್ಟಿ ಆರೋಪ ಮಾಡುತ್ತಾರೆ. ಸೋತು ಸುಣ್ಣವಾದ ಬಿಜೆಪಿಗೂ ಇದೇ ಬೇಕಾಗಿದೆ. ಇವೆರಡೂ ಒಂದು ರೀತಿ ನಾಯಿ ಹಸಿದಿದೆ ಮತ್ತು ಅನ್ನ ಹಳಿಸಿದೆ ಎಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ. ಅವರಿಗಿದೆಯಾ (ಕುಮಾರಸ್ವಾಮಿಗೆ) ಅಥವಾ ಬಿಜೆಪಿಗಿದೆಯಾ? ಆಡಳಿತಾತ್ಮಕ ದೃಷ್ಟಿಯಿಂದ ಅದೊಂದು ಸಹಜ ಪ್ರಕ್ರಿಯೆ. ಇದೊಂದು ದಂಧೆ ಮಾಡಿಕೊಂಡಿದ್ದವರು ಅವರು, ನಾವಲ್ಲ. ವರ್ಗಾವಣೆ ಆರೋಪ ಸಾಬೀತಾದರೆ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.