ಬೆಂಗಳೂರು: ‘ರಾಜ್ಯದ ಜನಕ್ಕೆ ಸಿದ್ದರಾಮಯ್ಯ ಪವರ್ ಗೆ ಬರಬಬೇಕು ಎನ್ನುವುದಿದೆ.ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಸೇಫ್ ‘ ಎಂದು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಭಾನುವಾರ ಹೇಳಿಕೆ ನೀಡಿದ್ದಾರೆ.
‘ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೆ ಗೆಲ್ಲುತ್ತಾರಾ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ರಾಜ್ಯದಲ್ಲಿ 51 ಮೀಸಲು ಕ್ಷೇತ್ರಗಳಿವೆ. ಈ ಕ್ಷೇತ್ರಗಳನ್ನು ಬಿಟ್ಟು ಎಲ್ಲೇ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ’ ಎಂದರು.
‘ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿ, ಜೆಡಿಎಸ್ ಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಅಂತ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಅಂದರೆ ಮಾಸ್ ಲೀಡರ್ ಸಿದ್ದರಾಮಯ್ಯರವರನ್ನೇ ಟಾರ್ಗೆಟ್ ಮಾಡಬೇಕು. ಅವರ ಮೇಲೆ ಅಟ್ಯಾಕ್ ಮಾಡಿದರೆ ಪಕ್ಷ ಸೋಲುತ್ತದೆ ಅಂತ ಅಂದುಕೊಂಡಿದ್ದಾರೆ, ಆದರೆ 2023 ರಲ್ಲಿ ಕಾಂಗ್ರೆಸ್ ಪಕ್ಷವೇ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ’ ಎಂದರು.
ಬಿಜೆಪಿಯ ಎಸ್ ಟಿ ಸಮಾವೇಶ ಕುರಿತು ಕಿಡಿ ಕಾರಿ, ‘ಬಿಜೆಪಿಗೆ ಸಾಮಾಜಿಕ ನ್ಯಾಯ,ಸಮಾನತೆ, ಮೀಸಲಾತಿ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ಇಂತಹ ಪಕ್ಷ ನೊಂದ ಸಮುದಾಯಗಳ ಸಮಾವೇಶ ಮಾಡುತ್ತೇವೆ ಅಂತ ಮೊಸಳೆ ಕಣ್ಣೀರು ಹಾಕುತ್ತದೆ. ಸಂವಿಧಾನದ ಅಶಯ ಜಾರಿ ಮಾಡೋಕೆ ಎಳ್ಳಷ್ಟು ಬಿಜೆಪಿಗೆ ಇಷ್ಟ ಇಲ್ಲ.ಅ ಆಶಯಗಳನ್ನ ಜಾರಿ ಮಾಡೋದು ಕಾಂಗ್ರೆಸ್ ಮಾತ್ರ’ ಎಂದರು.
‘ಸಿದ್ದರಾಮಯ್ಯ ಸ್ಪರ್ಧೆ ಮಾಡಬೇಕಾ? ಮಾಡಬಾರದು’ ಎಂಬ ಸಂತೋಷ್ ಲಾಡ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ‘ಈ ಕುರಿತು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರ ತೀರ್ಮಾನವೇ ಅಂತಿಮ’ ಎಂದರು.