Advertisement

ಕೋರ್ಟ್‌ನಲ್ಲಿನ್ನು ಸಿದ್ದರಾಮಯ್ಯ ವಕೀಲಿಕೆ! ವಕೀಲಿ ವೃತ್ತಿಗೆ ಮರಳಲು ಮುಂದಾದ ಸಿದ್ದರಾಮಯ್ಯ

09:57 AM Jan 26, 2020 | sudhir |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ 38 ವರ್ಷಗಳಿಂದ ಹೋರಾಟ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾದಿ ಜೊತೆಗೆ ಕರಿಕೋಟು ಹಾಕಲು ಮುಂದಾಗಿದ್ದಾರೆ.

Advertisement

ಮೂಲತಃ ವಕೀಲರಾಗಿರುವ ಸಿದ್ದರಾಮಯ್ಯ 1982 ರಲ್ಲಿ ರಾಜಕೀಯ ಪ್ರವೇಶ ಮಾಡಿ, ವಿಧಾನಸೌಧದ ಮೆಟ್ಟಿಲೇರಿದ ಮೇಲೆ ವಕೀಲಿ ವೃತ್ತಿಗೆ ವಿದಾಯ ಹೇಳಿ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದರು. ನಂತರದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷಗಿರಿಯಿಂದ ಸಚಿವ, ಪ್ರತಿಪಕ್ಷ ನಾಯಕ, ಮುಖ್ಯಮಂತ್ರಿ ಹುದ್ದೆವರೆಗೆ ಕಾರ್ಯನಿರ್ವಹಿಸಿ ಇದೀಗ ವಕೀಲಿ ವೃತ್ತಿಗೆ ಮರಳಲು ಚಿಂತನೆ ನಡೆಸಿದ್ದಾರೆ.

ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದಾಗ ತಾವು ಮತ್ತೆ ವಕೀಲಿ ವೃತ್ತಿಯನ್ನು ಆರಂಭಿಸುವ ಬಗ್ಗೆ ತಮ್ಮ ಆಪ್ತರ ಮುಂದೆ ಒಲವು ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಸದಸ್ಯತ್ವ ನವೀಕರಣಕ್ಕೆ ತಯಾರಿ
ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗುವವರೆಗೂ ಮೈಸೂರು ಬಾರ್‌ ಕೌನ್ಸಿಲ್‌ನ ಸಕ್ರೀಯ ಸದಸ್ಯತ್ವ ಹೊಂದಿದ್ದರು. ಮುಖ್ಯಮಂತ್ರಿಯಾದ ತಕ್ಷಣ ಕಾನೂನು ಪ್ರಕಾರ ತಮ್ಮ ಬಾರ್‌ ಕೌನ್ಸಿಲ್‌ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಇರಿಸಿದ್ದರು. ಆದರೆ, ಈಗ ತಾವು ಅಮಾನತಿನಲ್ಲಿರಿಸಿದ್ದ ಸದಸ್ಯತ್ವವನ್ನು ನವೀಕರಣಗೊಳಿಸಲು ರಾಜ್ಯ ಬಾರ್‌ ಕೌನ್ಸಿಲ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ತಿಂಗಳಾಂತ್ಯಕ್ಕೆ ನವೀಕರಣ ಮಾಡಿಸಿಕೊಳ್ಳಲು ಸಾಧ್ಯತೆ ಇದ್ದು, ಫೆಬ್ರವರಿಯಿಂದಲೇ ಸಿದ್ದರಾಮಯ್ಯ ಅವರು ಅಧಿಕೃತವಾಗಿ ವಕೀಲಿ ವೃತ್ತಿ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ರಾಜಕೀಯದಿಂದ ತೆರೆಗೆ?
ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದ್ದು, ಸಿದ್ದರಾಮಯ್ಯ ಮೂಲ ಕಾಂಗ್ರೆಸ್‌ ನಾಯಕರಿಂದ ಪ್ರತ್ಯೇಕ ಬಣ ಕಟ್ಟಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಹು¨ªೆಯಲ್ಲಿ ಮುಂದುವರೆಯಲು ಪ್ರಯತ್ನ ನಡೆಸುತ್ತಿದ್ದಾರೆ.  ಅವರ ವಿರೋಧಿ ಬಣ ಅವರಿಗೆ ಎರಡೂ ಹು¨ªೆಗಳನ್ನು ತಪ್ಪಿಸಲು ಬಹಿರಂಗವಾಗಿಯೇ ತಿರುಗಿ ಬಿದ್ದಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಸಿದ್ದರಾಮಯ್ಯ ವಕೀಲಿಯಲ್ಲಿ ಸಕ್ರಿಯರಾಗಲು ಮುಂದಾಗಿರುವುದು ಕುತೂಹಲ ಮೂಡಿಸುವಂತೆ ಮಾಡಿದೆ.

ನಳಿನಿ ಪರ ವಾದಿಸುವರೇ
ಮೈಸೂರಿನಲ್ಲಿ ಸಿಎಎ ವಿರದ್ದ ನಡೆದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ ಪೋಸ್ಟರ್‌ ಪ್ರದರ್ಶಿಸಿದ್ದ ನಳಿನಿ ಎನ್ನುವ ಯುವತಿ ಪರ ವಾದ ಮಾಡದಿರಲು ಮೈಸೂರು ಬಾರ್‌ ಕೌನ್ಸಿಲ್‌ ನಿರ್ಧರಿಸಿದೆ. ಮೈಸೂರು ಬಾರ್‌ ಕೌನ್ಸಿಲ್‌ ನಿರ್ಣಯವನ್ನು ಸಿದ್ದರಾಮಯ್ಯ ಸಂವಿಧಾನ ಬಾಹಿರ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಮೈಸೂರು ಬಾರ್‌ ಕೌನ್ಸಿಲ್‌ ವಕೀಲರೊಬ್ಬರು ಸಿದ್ದರಾಮಯ್ಯ ಅವರಿಗೇ ಬಂದು ನಳಿನಿ ಪರ ವಾದ ಮಾಡುವಂತೆ ಸವಾಲು ಹಾಕಿದ್ದಾರೆ. ಮೈಸೂರು ಬಾರ್‌ ಕೌನ್ಸಿಲ್‌ ಸದಸ್ಯರ ಸವಾಲು ಸ್ವೀಕರಿಸಿ ನಳಿನಿ ಪರ ವಾದ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next