Advertisement

ಅತೃಪ್ತ ಶಾಸಕರ ಸಮಾಧಾನಪಡಿಸಿದ ಸಿದ್ದರಾಮಯ್ಯ

11:03 AM Jul 18, 2017 | Team Udayavani |

ಬೆಂಗಳೂರು: “ಪಕ್ಷದ ಪದಾಧಿಕಾರಿಗಳ ಆಯ್ಕೆಯನ್ನು ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಶಾಸಕರು ನಿಮ್ಮ ಕ್ಷೇತ್ರದಲ್ಲಿ ಚುನಾವಣೆ
ಸಿದ್ಧತೆ ಮಾಡಿಕೊಳ್ಳಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರಿಗೆ ಈ ಸೂಚನೆ ನೀಡಿರುವ ಅವರು, ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸರ್ಕಾರದ
ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಮತ್ತು ನಿರಂತರ ಜನ ಸಂಪರ್ಕದಲ್ಲಿರುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯೇ ಶಾಸಕರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಶಾಸಕರೂ ಸಭೆಯಲ್ಲಿ ಯಾವುದೇ ತಕರಾರು ಎತ್ತದೆ, ಸೂಚನೆಗೆ ತಲೆಬಾಗಿ ಶಾಂತರಾಗಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಕುಳಿತಿದ್ದರಿಂದ ಅನೇಕ ಶಾಸಕರು ತಮ್ಮ ಕ್ಷೇತ್ರಗಳ ಕೆಲಸಗಳನ್ನು ಮಾಡಿಸಿಕೊಳ್ಳಲು ಫೈಲ್‌ ಹಿಡಿದು ಅನುಮೋದನೆ ಪಡೆದುಕೊಂಡರು ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ಪರಮೆಶ್ವರ್‌ ಕೂಡ ಶಾಸಕರು ವಿಧಾನಸಭೆ ಚುನಾವಣೆಗೆ ಹೆಚ್ಚಿನ ಗಮನ ನೀಡಬೇಕಿರುವುದರಿಂದ ಅವರನ್ನು ಪದಾಧಿಕಾರಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಹೈಕಮಾಂಡ್‌ ಸೂಚನೆ ಕೂಡ ಅದೇ ಆಗಿತ್ತು. ವಿಧಾನಸಭೆ ಚುನಾವಣೆ ಮುಗಿದ ನಂತರ ಲೋಕಸಭೆ ಚುನಾವಣೆ ಒಳಗೆ ಶಾಸಕರಿಗೂ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ
ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಶಾಸಕಾಂಗ ಸಭೆ ಮುಗಿದ ನಂತರ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಪದಾಧಿಕಾರಿಗಳ ಪಟ್ಟಿಯಲ್ಲಿ ಎಲ್ಲರಿಗೂ ಆದ್ಯತೆ ನೀಡಿದ್ದೇವೆ. ಸಣ್ಣಪುಟ್ಟ ಅಸಮಾಧಾನಗಳಿದ್ದರೆ ಬಗೆ ಹರಿಸಿಕೊಳ್ಳುತ್ತೇವೆ. ಬಹಿರಂಗವಾಗಿ ಹೇಳಿಕೆ ನೀಡುವಷ್ಟು ದೊಡ್ಡ ಸಮಸ್ಯೆಗಳಿಲ್ಲ ಎಂದು ಪರೋಕ್ಷವಾಗಿ ಸಂಸದ ಕೆ.ಎಚ್‌. ಮುನಿಯಪ್ಪ ಅವರಿಗೆ ಟಾಂಗ್‌ ನೀಡಿದರು. ಮಾಜಿ ಉಪ ಪ್ರಧಾನಿ ಜಗಜೀವನ್‌ ರಾಂ ಅವರ ಪುತ್ರಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜಗಜೀವನ್‌ ರಾಂ ಅವರಿಗೆ ಜಾತಿ ವ್ಯವಸ್ಥೆಯಿಂದ ಪ್ರಧಾನಿಯಾಗುವ ಅವಕಾಶ ಸಿಗಲಿಲ್ಲ. ಈಗ ಅವರ ಮಗಳು ಒಳ್ಳೆಯ ಸಂಸದೀಯ ಪಟು. ಅವರು ರಾಷ್ಟ್ರಪತಿಯಾಗಲಿ
ಎಂದು ಹೇಳಿದರು.

ಸಭೆಯಲ್ಲಿ ವರ್ಗಾವಣೆ ಪ್ರಸ್ತಾಪ 
ಐಪಿಎಸ್‌ ಅಧಿಕಾರಿಗಳ ಗಲಾಟೆ ಕುರಿತಂತೆಯೂ ಶಾಸಕಾಂಗ ಸಭೆಯಲ್ಲಿ ಶಾಸಕರು ಪ್ರಸ್ತಾಪ ಮಾಡಿದ್ದು, ಸರ್ಕಾರಕ್ಕೆ ಮುಜುಗರ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿಯೇ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸೂಚಿಸಿದ್ದೇನೆ. ಅಧಿಕಾರಿಗಳಿಗೆ ಸರ್ಕಾರದ ಬಗ್ಗೆ ಭಯ ಹುಟ್ಟಿಸುವ ಸಂದೇಶ ರವಾನೆ ಮಾಡಲು ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರ ಎದುರು ಹೇಳಿದ್ದಾರೆ ಎಂದು ಗೊತ್ತಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next