Advertisement

ದಲಿತರ ಏಳಿಗೆ ಸಹಿಸದ ಸಿದ್ದರಾಮಯ್ಯ; ಛಲವಾದಿ

04:58 PM Jun 11, 2022 | Team Udayavani |

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ದಲಿತರಿಗೆ ಯಾವತ್ತು ಒಳ್ಳೆಯದನ್ನು ಬಯಸಿದವರಲ್ಲ. 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿಲ್ಲ. ಆಗ ವಿರೋಧಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಇದನ್ನು ಸಹಿಸದ ಸಿದ್ದರಾಮಯ್ಯ ವಿರೋಧಪಕ್ಷದ ನಾಯಕ ಸ್ಥಾನವನ್ನು ನನಗೆ ಕೊಡಬೇಕು. ಇಲ್ಲದಿದ್ದರೆ ಪಕ್ಷ ಬಿಡುವುದಾಗಿ ಬ್ಲಾಕ್‌ ಮೇಲ್‌ ಮಾಡಿದ್ದರು ಎಂದರು.

ಪರಿಣಾಮ ಕಾಂಗ್ರೆಸ್‌ ವರಿಷ್ಠರು ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಿದ್ದರಾಮಯ್ಯಗೆ ನೀಡಿ ಖರ್ಗೆ ಅವರನ್ನು ದೆಹಲಿಗೆ ಕರೆಸಿಕೊಂಡಿತು. ಈ ಸಂಬಂಧ ಎಚ್‌.ಡಿ.ಕುಮಾರ ಸ್ವಾಮಿ ಅವರು ಮಾಡಿರುವ ಆರೋಪ ನೂರಕ್ಕೆ ನೂರು ಸತ್ಯವಾಗಿದೆ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿಗೆ ಮತ ಕೊಡಿ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅಡ್ಡ ಮತದಾನಕ್ಕೆ ಪ್ರೇರೇಪಿಸುವ ಕೆಲಸವಾಗಿದೆ. ಈ ಹಿಂದೆ ಅವರದೇ ಪಕ್ಷದವರು ಬೇರೆಯವರಿಗೆ ಮತ ಹಾಕಿದಾಗ ಸದಸ್ಯತ್ವ ತೆಗೆಸಿದ್ದರು. ಸಿದ್ದರಾಮಯ್ಯಗೆ ಎಷ್ಟು ನಾಲಿಗೆ ಇದೆ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಾಗೆ ಎಂದು ಕಿಡಿಕಾರಿದರು.

ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಹೇಳುವ ಸಿದ್ದರಾಮಯ್ಯ ಅವರು ನಿಜವಾದ ಕೋಮುವಾದಿಯಾಗಿದ್ದಾರೆ. ಜಾತ್ಯತೀತ ನಡೆ ಅವರದ್ದಲ್ಲ. ಒಬ್ಬರನ್ನೊಬ್ಬರು ಮೂದಲಿಸುತ್ತಿದ್ದಾರೆ. ಇಂತಹ ಕೆಟ್ಟ ರಾಜಕಾರಣ ಮತ್ತೂಂದಿಲ್ಲ. ಅಗೌರವ ತೋರುವುದು ರಾಜಕಾರಣಿಗಳಿಗೆ ತರವಲ್ಲ. ನಿಮ್ಮ ಗೌರವ ನೀವೇ ಕಾಪಾಡಿಕೊಳ್ಳಬೇಕು ಎಂದರು.

Advertisement

ಎಸ್ಸಿ ಮೋರ್ಚಾ ರಾಜ್ಯಾದ್ಯಂತ ಅದ್ಭುತ ಸಂಘಟನೆಯಾಗಿದೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಲಿತ ಸಮುದಾಯದವರು ಬಿಜೆಪಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೈ.ವಿ.ರವಿಶಂಕರ್‌ ಅವರು ಕಳೆದ ಬಾರಿ ಅಲ್ಪ ಮತಗಳಿಂದ ಸೋತಿದ್ದರು. ಆದರೆ, ಈ ಬಾರಿ ಪದವೀಧರ ಮತದಾರರು ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಎನ್‌.ನಂಜುಂಡಸ್ವಾಮಿ, ಕಾರ್ಯದರ್ಶಿ ಪರಮಾನಂದ, ಮಹೇಶ್‌ ಕುಮಾರ್‌, ಜಿಲ್ಲಾ ವಕ್ತಾರ ಶಿವಕುಮಾರ್‌, ಮುಖಂಡರಾದ ಮೂಡ್ನಾಕೂಡು ಪ್ರಕಾಶ್‌, ಪದ್ಮಾ ಇದ್ದರು.

ಚಡ್ಡಿ ಮಾನವ ಕುಲದ ಗೌರವ ಕಾಪಾಡುವ ವಸ್ತು

ಚಡ್ಡಿಯು ಮಾನವ ಕುಲದ ಗೌರವ ಕಾಪಾಡುವ ವಸ್ತುವಾಗಿದೆ. ಚಡ್ಡಿನ ಯಾರಾದರು ಹಾಕದಿದ್ದರೆ ನಾನೇನು ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ
ಅವರು ಚಡ್ಡಿಗಳನ್ನು ಸುಡುತ್ತೇನೆ ಎಂದು ಹೇಳಿದಾಗ ಚಡ್ಡಿಗಳನ್ನು ಕೊಡಲು ಅವರ ಮನೆಗೆ ಹೋಗಿದ್ದೆ. ಆದರೆ, ಅವರು ಇರಲಿಲ್ಲ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂಬುದು ಸ್ವಂತ ತೀರ್ಮಾನ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next