ಬೆಂಗಳೂರು: ಕುರಿಗಳು ಸತ್ತರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯನ್ನು ಮತ್ತೆ ಜಾರಿಗೆ ತರದಿದ್ದರೆ ವಿಧಾನಸಭೆಯಲ್ಲಿ ಹೋರಾಟ ನಡೆಸುವುದಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ನಗರದ ಮೌರ್ಯ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಳೆ, ಸಿಡಿಲು, ಪ್ರವಾಹ ಹಾಗೂ ಅಪಘಾತದಲ್ಲಿ ಕುರಿಗಳು ಸಾವಿಗೀಡಾದರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿತ್ತು. ಕುರಿಗಳು ಮಾತ್ರವಲ್ಲ, ದನ ಮತ್ತು ಎಮ್ಮೆಗಳು ಸತ್ತರೆ ಹತ್ತು ಸಾವಿರ ರೂ.ಗಳ ಪರಿಹಾರ ನಿಡಲಾಗುತ್ತಿತ್ತು. ಆದರೆ, ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷದಿಂದ ಯೋಜನೆ ಸ್ಥಗಿತಗೊಳಿಸಿದೆ. 30 ಕೋಟಿ ರೂ.ಗಳ ಬಾಕಿಯನ್ನೂ ಪಾವತಿ ಮಾಡಿಲ್ಲ ಎಂದರು.
ಇದನ್ನೂ ಓದಿ:ರೈತರಿಗೆ ಸಿಗಲಿ ತಂತ್ರಜ್ಞಾನ- ಅರಿವಿನ ಉತ್ತೇಜನ – ಮಾಜಿ ಸಚಿವ ಕೃಷ್ಣ ಭೈರೇಗೌಡ
ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಗಳಿಗೆ ಯೋಜನೆ ಹೆಸರೇ ತಿಳಿದಿರಲಿಲ್ಲ. ಅಧಿಕಾರಿಗಳು ಮಾಹಿತಿ ನೀಡಿದರೂ ಪ್ರಯೋಜನವಾಗಲಿಲ್ಲ. ಕುರುಬರ ಮಾತ್ರವಲ್ಲ, ಹಲವಾರು ಸಮುದಾಯದವರು ಕುರಿಗಳ ಸಾಕಣೆ ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ 500 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಕುರಿ ಸಾಕಣೆ ಒಂದು ಸಮುದಾಯಕ್ಕೆ ಈಗ ಸೀಮಿತವಾಗಿಲ್ಲ. ಕುರಿ ಸಾಕಣೆ ಎಂಬುದು ಬದುಕಿಗೆ ಒಂದು ದಾರಿ. ಒಂದು ಕುರಿಗೆ ಹತ್ತರಿಂದ ಇಪ್ಪತ್ತು ಸಾವಿರ ರೂ.ಗಳ ಮೌಲ್ಯವಿದೆ. ಆ ಕುರಿ ಸತ್ತರೆ ಕುರಿಗಾರರ ಬದುಕಿನ ದಾರಿಯೇ ಮುಚ್ಚಿ ಹೋಗುತ್ತದೆ. ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪರಿಹಾರದ ಮೊತ್ತವನ್ನು ಹತ್ತು ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಕುರಿಗಳನ್ನು ಕಾಡಿನಲ್ಲಿ ಮೇಯಿಸಲು ಹಾಗೂ ಕಾಯಿಲೆ ಕಾಣಿಸಿಕೊಂಡಾಗ ಕುರಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ಮತ್ತು ಔಷಧ ನೀಡಲು ತಮ್ಮ ಸರ್ಕಾರದ ಅವಧಿಯಲ್ಲಿ ಆದೇಶ ಮಾಡಲಾಗಿತ್ತು. ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ರಚನೆಯಾಗಿದ್ದೂ ನಮ್ಮ ಸರ್ಕಾರ ಇದ್ದಾಗ. ಅನುಗ್ರಹ ಯೋಜನೆಯನ್ನು ಸರ್ಕಾರ ಮತ್ತೆ ಜಾರಿಗೆ ತರದಿದ್ದರೆ ವಿಧಾನಸಭೆಯಲ್ಲಿ ಮತ್ತೆ ತೀವ್ರ ಹೋರಾಟ ನಡೆಸುವುದಾಗಿ ಸಿದ್ದರಾಮಯ್ಯ ಅವರು ಹೇಳಿದರು.
ಇದನ್ನೂ ಓದಿ:ಯಾವುದಕ್ಕೂ ಕೊರತೆಯಾಗದಂತೆ ಬಜೆಟ್ ಮಂಡಿಸುತ್ತೇನೆ: ಸಿಎಂ ಯಡಿಯೂರಪ್ಪ
ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಟಿ.ಬಿ. ಜಯಚಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.