Advertisement

ನಿರಪರಾಧಿ ಜೈಲಿಗಟ್ಟಿರುವುದು ಅಮಾನವೀಯ: ಸಿದ್ದು

10:22 AM Feb 15, 2020 | Sriram |

ಬೀದರ:ಶಾಹೀನ್‌ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ಸಂಬಂಧ ಸುಳ್ಳು ದೇಶದ್ರೋಹ ಪ್ರಕರಣ ದಾಖಲಿಸಿ,ನಿರಪರಾಧಿಗಳನ್ನು ಜೈಲಿಗಟ್ಟಿರುವುದು ಅಮಾನವೀಯ ಕೃತ್ಯ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಾಗಿದೆ. ಈ ನಿಲುವಿನ ವಿರುದ್ಧ ಸದನದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಹೀನ್‌ ಸಂಸ್ಥೆ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ರದರ್ಶನ ಮಾಡಿರುವ ನಾಟಕದಲ್ಲಿ ಬಾಲಕಿಯು ಪೌರತ್ವ ಕಾಯ್ದೆ ಸಂಬಂಧ ದಾಖಲೆಗಳು ಕೇಳಲು ಬಂದವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳಿರುವುದು ನಿಜ. ಆದರೆ, ಆಕೆ ಪ್ರಧಾನಿ ಸೇರಿದಂತೆ ಯಾರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಇದೊಂದು ವಿಡಂಬಣೆ ನಾಟಕ. ಈ ವಿಷಯ ಗಂಭೀರವಾಗಿ ಪರಿಗಣಿಸಿ ಕಲಂ 124(ಎ) ಅಡಿ ದೇಶದ್ರೋಹ ಪ್ರಕರಣ ದಾಖಲಿಸಿ, ಶಾಲೆ ಮುಖ್ಯಗುರು ಹಾಗೂ ಬಾಲಕಿ ತಾಯಿ ಬಂಧಿಸಿರುವುದು ಕಾನೂನು ಬಾಹಿರವಾಗಿದೆ ಎಂದರು.

ನಾನು ಕೂಡ ಒಬ್ಬ ವಕೀಲ, ಐಪಿಸಿ-ಸಿಆರ್‌ಪಿಗಳ ಬಗ್ಗೆ ಪಾಠ ಮಾಡಿದ್ದೇನೆ. ಇದೊಂದು ವಿಡಂಬಣಾತ್ಮಕ ನಾಟಕವಷ್ಟೇ, ಇದರಲ್ಲಿ ಯಾರನ್ನೂ ಸಹ ಟಾರ್ಗೆಟ್‌ ಮಾಡಲಾಗಿಲ್ಲ. ಹಾಗಾಗಿ ಈ ಘಟನೆ ದೇಶದ್ರೋಹ ಕೇಸ್‌ ಮಾತ್ರವಲ್ಲ, ಮಾನಹರಣ ಕೇಸ್‌ ವ್ಯಾಪ್ತಿಗೂ ಬರುವುದಿಲ್ಲ. ಆದರೂ ಪೊಲೀಸರು ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಮಹಿಳೆಯನ್ನು ಜೈಲಿಗಟ್ಟಿದ್ದಲ್ಲದೇ, ಮಕ್ಕಳನ್ನು ಹಲವು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರ ವರ್ತನೆಗೆ ರಾಜ್ಯ ಸರ್ಕಾರದ ಪ್ರಭಾವವೇ ಕಾರಣ. ಮೈಸೂರು ಮತ್ತು ಬಳ್ಳಾರಿಯಲ್ಲಿಯೂ ಇಂಥದ್ದೇ ಪ್ರಕರಣಗಳು ನಡೆದಿವೆ. ದೇಶದ್ರೋಹ ಕಾಯ್ದೆ ಬ್ರಿಟಿಷರ ಕಾಲದ ಕಾನೂನು ಆಗಿದ್ದು, ಭಾರತೀಯರ ವಿರುದ್ಧ ಬ್ರಿಟಿಷರು ಈ ಕಾನೂನು ಬಳಸುತ್ತಿದ್ದರು. ಅಂದಿನ ಕಾನೂನು ಇಂದಿಗೂ ಅನುಸರಿಸಲಾಗುತ್ತಿದ್ದು, ಐಪಿಸಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದರು.

ಜೈಲು-ಶಾಲೆಗೆ ಸಿದ್ದು ಭೇಟಿ
ಮಕ್ಕಳಿಂದ ನಾಟಕ ಪ್ರದರ್ಶನ ವೇಳೆ ಪ್ರಧಾನಿಗೆ ಅವಹೇಳನ ಸಂಬಂಧ ನಗರದ ಶಾಹೀನ್‌ ಶಿಕ್ಷಣ ಸಂಸ್ಥೆ ವಿರುದ್ಧ ದೇಶದ್ರೋಹ ಪ್ರಕರಣ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುಖ್ಯಗುರು ಮತ್ತು ವಿದ್ಯಾರ್ಥಿನಿ ತಾಯಿಯನ್ನು ಶುಕ್ರವಾರ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಎದೆಗುಂದದಂತೆ ಧೈರ್ಯ ತುಂಬಿದರು. ನಗರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ನೇರವಾಗಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿ ಮುಖ್ಯಗುರು ಮತ್ತು ಬಾಲಕಿಯ ತಾಯಿ ಜತೆಗೆ ಕೆಲ ಕಾಲ ಮಾತುಕತೆ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು. ನಂತರ ಶಾಹೀನ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ, ನಾಟಕದಲ್ಲಿ ಪ್ರದರ್ಶನ ಮಾಡಿದ ಬಾಲಕಿ ಜತೆಗೂ ಮಾತನಾಡಿ ಧೈರ್ಯ ಹೇಳಿದರು. ಸಿದ್ದರಾಮಯ್ಯಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಶಾಸಕರು ಮತ್ತು ಎಂಎಲ್‌ಸಿಗಳು ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next