ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನೂತನ ಕುರುಬರ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಸೆ.22ರಂದು ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ
ಕಾರ್ಯಾಧ್ಯಕ್ಷ ಅಂಜನಿ ಸೋಮಣ್ಣ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರದೇಶ ಕುರುಬರ ಸಂಘದ ಮಾಲೂರು ಶಾಖೆ ಮತ್ತು ಮಾಲೂರು ಕನಕದಾಸ ಹಿಂದುಳಿದ ವರ್ಗಗಳ ಸಂಘದ ವತಿಯಿಂದ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ.
ಮಾಲೂರು ಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಾಗಿನೆಲೆ ಕ್ಷೇತ್ರದ ಕನಕ ಗುರು ಪೀಠಾಧ್ಯಕ್ಷ ನಿರಂಜನಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಟ್ಟಡದ ಉದ್ಘಾಟನೆ ಯನ್ನು ನೆರವೇರಿಸುವರು. ಕನಕದಾಸರ ಪ್ರತಿಮೆಯನ್ನು ಸಂಸದ ಕೆ.ಎಚ್. ಮುನಿಯಪ್ಪ ಅನಾವರಣ ಮಾಡಲಿದ್ದು, ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಅರಣ್ಯ ಸಚಿವ ಶಂಕರ್ ಇವರಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದ್ದು, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರಿಂದ ದಾನಿಗಳ ಸನ್ಮಾನ ನೆರವೇರಲಿದೆ. ಮಾಲೂರು ಕುರುಬರ ಸಂಘದ ಅಧ್ಯಕ್ಷ
ಎಂ.ವಿ.ಹನುಮಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಎಂ.ವೆಂಕಟರಮಣಪ್ಪ ನಿವೇಶನ ದಾನ ಮಾಡಿದ್ದಾರೆ. ನಿವೇಶನದಲ್ಲಿ ಸುಸಜ್ಜಿತವಾದ 70 ಚದರ ವಿಸ್ತೀರ್ಣದ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ತಾಲೂಕಿನ ಹಾಗೂ ಇತರೆ ಪ್ರದೇಶದ ಎಲ್ಲಾ ವರ್ಗದ ನಾಗರೀಕರ ಮತ್ತು ಜನಾಂಗದವರ ಸಹಕಾರದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 50 ರಿಂದ 60
ವಿದ್ಯಾರ್ಥಿಗಳು ಊಟ ಮತ್ತು ವಾಸ್ತವ್ಯ ಮಾಡಲು ಅನುಕೂಲ ಮಾಡಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಚಿಕ್ಕಹನುಮಪ್ಪ, ಸಮುದಾಯದ ಮುಖಂಡರಾದ ತಂಬಳ್ಳಿ ಮುನಿಯಪ್ಪ, ವೇಮಣ್ಣ, ರಾಜಣ್ಣ, ಅನಂತರಾಜು, ಅಶೋಕ್ ಇತರರಿದ್ದರು.