Advertisement

ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ತಂತ್ರ: ಸಿದ್ದು

11:21 PM Dec 03, 2022 | Team Udayavani |

ಬೆಂಗಳೂರು: ಸೋಲಿನ ಭೀತಿಯಲ್ಲಿರುವ ರಾಜ್ಯ ಬಿಜೆಪಿ ಬೀದಿ ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿರುವುದು, ಧರ್ಮ, ಸಂಸ್ಕೃತಿ ಬಗ್ಗೆ ಬೊಗಳೆ ಬಿಡುವ ಸಂಘ ಪರಿವಾರದ ನೈತಿಕ ಅಧಃಪತನವಲ್ಲದೆ ಮತ್ತೇನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಗಣಿ ಲೂಟಿಕೋರ ರೌಡಿಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಯ ಮುಖ್ಯಮಂತ್ರಿಗಳು ಕೊನೆಗೆ ಜೈಲು ಪಾಲಾಗಬೇಕಾಯಿತು. ಈಗ ಹೊಸ ರೌಡಿ ಪಡೆ ಕಟ್ಟುತ್ತಿರುವುದು ಯಾರನ್ನು ಜೈಲಿಗೆ ಕಳುಹಿಸಲು ಎಂದು ಕೇಳಿದ್ದಾರೆ.

ಬಾಯಿ ಬಿಟ್ಟರೆ ಸಂಸ್ಕೃತಿ, ಆಚಾರ, ವಿಚಾರದ ಮಂತ್ರ ಉದುರಿಸುವ ಆರೆಸ್ಸೆಸ್‌ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿಕೊಂಡಿದ್ದು ರೌಡಿ ಮೋರ್ಚಾ ಕಟ್ಟಲು ಸಲಹೆ ನೀಡಲಿಕ್ಕಾಗಿಯೇ? ಆರೆಸ್ಸೆಸ್‌ ಮೌನವು ಸಮ್ಮತಿಯ ಲಕ್ಷಣವೇ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ವಾಗ್ಧಾಳಿ
ಈ ಹಿಂದೆ ರೌಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು. ಈಗ ಬಿಜೆಪಿಯ ರೌಡಿ ರಾಜಕೀಯದಿಂದಾಗಿ ಅದೇ ರೌಡಿಗಳಿಗೆ ಪೊಲೀಸರು ಸೆಲ್ಯೂಟ್‌ ಹೊಡೆಯುವಂತಹ ಪರಿಸ್ಥಿತಿ ಉಂಟಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌, ರೌಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರ ನೈತಿಕ ಸ್ಥೈರ್ಯವನ್ನು ಬಿಜೆಪಿ ಕಿತ್ತುಕೊಂಡಿದೆ. ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Advertisement

ಯಾವ ರೌಡಿಯನ್ನೂ ಬಿಜೆಪಿಗೆ ಸೇರಿಸಿಕೊಳ್ಳುವು ದಿಲ್ಲ ಎಂದ ಬಸವರಾಜ ಬೊಮ್ಮಾಯಿ ಅವರೇ, ಸೈಕಲ್‌ ರವಿ ಸಚಿವ ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಸೇರಿಕೊಂಡಿದ್ದೇನು? ಬೆತ್ತನಗೆರೆ ಶಂಕರನನ್ನು ಸಂಸದ ಪ್ರತಾಪ್‌ ಸಿಂಹ ಸೇರಿಸಿಕೊಂಡಿದ್ದೇನು? ಆನೇಕಲ್‌ ಪುರಸಭೆಗೆ ಸರಕಾರವೇ (ಉಪ್ಪಿ) ಮಂಜುನಾಥನನ್ನು ನಾಮನಿರ್ದೇಶನ ಮಾಡಿದ್ದೇಕೆ ಎಂದು ಪ್ರಶ್ನಿಸಿದೆ.

ವಿನೂತನ ರೀತಿಯಲ್ಲಿ ಕೈ ಪ್ರಚಾರ
ಬೆಂಗಳೂರು: ಬಿಜೆಪಿಯ ರೌಡಿಸಂ ರಾಜಕೀಯದ ವಿರುದ್ಧ ಕಾಂಗ್ರೆಸ್‌ ವಿನೂತನ ರೀತಿಯಲ್ಲಿ ಪ್ರಚಾರ ಆರಂಭಿಸಿದೆ. https://www.leakedbjp.com ವೆಬ್‌ ಸೈಟ್‌ ಅನ್ನು ಹೊರತಂದಿದ್ದು 2023ರ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯ ಅನೌಪಚಾರಿಕತೆಯನ್ನು ಪ್ರದರ್ಶಿಸಲು ಈ ವೆಬ್‌ ಸೈಟ್‌ ಅನ್ನು ಮೀಸಲಿರಿಸಿದೆ. ಈ ವೆಬ್‌ಸೈಟ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಬೇಕಾಗುವ ಮಾನದಂಡಗಳ ಫೋಟೋಗಳೊಂದಿಗೆ “ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡುತ್ತಿದೆ. ಜತೆಗೆ ಬೆಂಗಳೂರಿನ ರೌಡಿ ಶೀಟರ್‌ಗಳನ್ನು ಮತ್ತು ಸ್ಲಂ ಲಾರ್ಡ್‌ಗಳನ್ನು ಬಿಜೆಪಿ ತನ್ನ ಕಾರ್ಯಕರ್ತರನ್ನಾಗಿ ಸೇರಿಸಿಕೊಳ್ಳುವ ಮೂಲಕ ರಾಜಕೀಯವನ್ನು ಹೇಗೆ ಅಪರಾಧೀಕರಿಸುತ್ತಿದೆ ಎಂಬುದರ ಕುರಿತು ವಿವರಗಳನ್ನು ನೀಡಲಿದೆ ಎಂದು ಕೆಪಿಸಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next