ರಾಯಚೂರು: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದ ಬಗ್ಗೆ ಜನರಿಗೆ ನೈಜ ವಿಚಾರಗಳನ್ನು ತಿಳಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆ.7ರಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಯುತ್ತಿದೆ. 3750 ಕಿಮೀ ಪಾದಯಾತ್ರೆ 14 ರಾಜ್ಯಗಳಲ್ಲಿ ಸಂಚರಿಸಲಿದೆ. ಸ್ವಾತಂತ್ರ್ಯ ದ ಬಳಿಕ ಐತಿಹಾಸಿಕ ಪಾದಯಾತ್ರೆ ಇದಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.15ರಂದು ಬಳ್ಳಾರಿಯಲ್ಲಿ ಮಧ್ಯಾಹ್ನ 1:30ಕ್ಕೆ ಪಾದಯಾತ್ರೆ ತಲುಪಲಿದ್ದು ಅಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. 16ರಂದು ಪಾದಯಾತ್ರೆ ಮಾಡುತ್ತೇವೆ. ಬಳಿಕ ಆಂಧ್ರಕ್ಕೆ ಹೋಗಿ ಮತ್ತೆ ಬರುತ್ತಾರೆ. ಮಂತ್ರಾಲಯ ಮಠಕ್ಕೆ ಹೋಗಿ ರಾಯಚೂರಿಗೆ ಬರುತ್ತಾರೆ.
ರಾಯಚೂರಿಗೆ 21ಕ್ಕೆ ಬರುತ್ತಾರೆ. ಇಲ್ಲಿಂದ ತೆಲಂಗಾಣಕ್ಕೆ ಹೋಗುತ್ತಾರೆ. ಕರ್ನಾಟಕದಲ್ಲಿ 21 ದಿನ ಕಾಲ 510 ಕಿಮೀ ಪಾದಯಾತ್ರೆ ಮಾಡಲಿದ್ದಾರೆ. ಎಲ್ಲೂ ಬಹಿರಂಗ ಸಮಾವೇಶ ಮಾಡುವುದಿಲ್ಲ. ಬಳ್ಳಾರಿಯಲ್ಲಿ ಮಾತ್ರ ಒಂದು ಸಮಾವೇಶ ಮಾಡಲಾಗುತ್ತದೆ ಎಂದರು.
ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಕೂಡ ಏರಿದೆ. ಜನ ಬಳಸುವ ವಸ್ತುಗಳ ಮೇಲೆಲ್ಲಾ ಜಿಎಸ್‌ಟಿ ಹಾಕುತ್ತಿದ್ದಾರೆ. ನರೇಂದ್ರ ಮೋದಿ ನಾವು ಜಿಎಸ್‌ಟಿ ತರುತ್ತೇವೆ ಅಂದಾಗ ವಿರೋಧ ಮಾಡಿದ್ದರು. ಮಂಡಕ್ಕಿ ಅದಾನಿ, ಅಂಬಾನಿ ಬೆಳೆಸುತ್ತಾರಾ? ಅದಕ್ಕೂ ಜಿಎಸ್‌ಟಿ ವಿಧಿಸುತ್ತಿದ್ದಾರೆ. ಡ್ರಾಪೌಟ್ ಅದಾನಿ ಈಗ ಜಗತ್ತಿನ ಎರಡನೇ ಅತಿ ದೊಡ್ಡ ಶ್ರೀಮಂತ. ಒಂದು ಕಡೆ ಕಾರ್ಪೊರೇಟ್‌ರ ಬೆಳೆಯುತ್ತಿದ್ದಾರೆ. ಇನ್ನೊಂದೆಡೆ ಬಡವರ ರಕ್ತ ಹೀರುತ್ತಿದ್ದಾರೆ ಎಂದರು.
ಮುಲಾಯಂ ಸಿಂಗ್ ಯಾದವ್ ಹಿರಿಯ ರಾಜಕಾರಣಿ. ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದವರು. ಅವರ ಮಗ ಅಖೀಲೇಶ್ ಸಿಎಂ ಆಗಿದ್ದರು. ಅವರದು ದೊಡ್ಡ ಕುಟುಂಬ. ಅವರ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ.
– ಸಿದ್ದರಾಮಯ್ಯ, ವಿಪಕ್ಷ ನಾಯಕ