ಬೆಂಗಳೂರು : ಚಾರ್ಜ್ ಶೀಟ್ ನಲ್ಲಿ ಸಂಪತ್ ರಾಜ್ ರನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಆದರೆ ಸಾಬೀತು ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಡಿಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನದಲ್ಲಿ ನಾವು ಯಾರ ಪರ ವಹಿಸಲು ಮತ್ತು ಯಾರನ್ನೂ ಬೆಂಬಲಿಸಲು ಹೋಗುವುದಿಲ್ಲ. ತಪ್ಪು ಎಸಗಿದವರಿಗೆ ಶಿಕ್ಷೆ ಆಗುತ್ತದೆ. ಚಾರ್ಜ್ ಶೀಟ್ ಹಾಕಿದ ತಕ್ಷಣ ಅಪರಾಧಿ ಆಗುವುದಿಲ್ಲ, ಸದ್ಯ ಅವರು ಆರೋಪಿಯಷ್ಟೆ. ಅವರ ಮೇಲಿನ ಆರೋಪಗಳು ಸಾಬೀತಾಗುವರೆಗೆ ಆರೋಪಿ ಅಷ್ಟೇ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲಿ. ಆರೋಪ ಸಾಬೀತು ಮಾಡುವುದು ಪೊಲೀಸರ ಕರ್ತವ್ಯ ಎಂದು ಹೇಳಿದರು.
ಎಂಟು ತಿಂಗಳ ಬಳಿಕ ಕಾಲೇಜು ಆರಂಭವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ- ಕಾಲೇಜು ಆರಂಭಿಸುವುದು ಬೇಡ ಎಂದು ಎರಡು ಬಾರಿ ಪತ್ರ ಬರೆದು ಹೇಳಿದ್ದೆ, ಶಾಲೆ ಆರಂಭಿಸಿದರೆ ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಹಾಕಿಕೊಳ್ಳಲು ಆಗುವುದಿಲ್ಲ ಹೇಳಿದ್ದೆ. ಇವತ್ತು ಕಾಲೇಜು ಆರಂಭಿಸಿದ್ದಾರೆ, ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಿಸಬೇಕು. ಹಾಜರಿಯನ್ನು ಕಡ್ಡಾಯಗೊಳಿಸಬಾರದು. ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಮಣಿದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎನ್ನುವುದು ಗೊತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರಿಗೆ ಸಂಬಳ ಕೊಡಬೇಕು. ಶುಲ್ಕ ತೆಗೆದುಕೊಳ್ಳದೆ ಇರುವುದಕ್ಕೆ ಆಗುವುದಿಲ್ಲ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದರು.
ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಹೊಂದಾಣಿಕೆ ವಿಚಾರದ ಕುರಿತು ಮಾತಾನಾಡಿದ ಅವರು, ಜೆಡಿಎಸ್ ಮೊದಲಿನಿಂದಲೂ ಹೊಂದಾಣಿಕೆ ಮಾಡಿಕೊಂಡೆ ಬಂದಿದೆ. ಎಲ್ಲಿ ಅಧಿಕಾರ ಇರುತ್ತದೋ ಅಲ್ಲಿ ಅವರು ಇರುತ್ತಾರೆ. ಜೆಡಿಎಸ್ ನವರದ್ದು ಅವಕಾಶವಾದಿ ರಾಜಕೀಯ. ಅದಕ್ಕೆ ಕಳೆದೆ ಬಾರಿ ಅಸೆಂಬ್ಲಿಯಲ್ಲಿ ನಾನು ಅವರನ್ನು ಬಿಜೆಪಿಯ ಬಿ ಟೀಂ ಎಂದು ಕರೆದದ್ದು ಎಂದು ಮಾಜಿ ಸಿಎಂ, ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಮರಾಠ ಪ್ರಾಧಿಕಾರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯ ಎನ್ನುವುದು ಎಲ್ಲರಿಗೂ ಕೊಡಬೇಕು. ಇದೊಂದು ಪಕ್ಕಾ ಓಲೈಕೆ ರಾಜಕಾರಣ. ಬಸವಕಲ್ಯಾಣ ಉಪ ಚುನಾವಣೆಯ ದೃಷ್ಟಿಯಿಂದ ಈ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.