Advertisement

ಬೆಡ್‌ ಬ್ಲಾಕಿಂಗ್‌: ಜಾತಿ ಧರ್ಮ ಎಳೆದು ತರಬೇಡಿ ನ್ಯಾಯಾಧೀಶರಿಂದ ತನಿಖೆ ನಡೆಸಿ:ಸಿದ್ದರಾಮಯ್ಯ

08:26 PM May 05, 2021 | Team Udayavani |

ಬೆಂಗಳೂರು: ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು ಬಿಬಿಎಂಪಿ ಅಧಿಕಾರಿಗಳ ವಿರುದ್ಧವಲ್ಲ. ವಿಧಾನಸೌಧದಲ್ಲಿ ಕುಳಿತಿರುವ ಮುಖ್ಯಮಂತ್ರಿ, ಸಚಿವರ ವಿರುದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸಂಸದ ತೇಜಸ್ವಿ  ಹಾಗೂ ಬಿಜೆಪಿ ಶಾಸಕರು ಹಾಸಿಗೆ ಬ್ಲಾಕಿಂಗ್‌ ದಂಧೆ ಬಯಲು ಗೊಳಿಸಿದ ಕುರಿತು ಟ್ವೀಟ್‌ ಮಾಡಿರುವ ಅವರು, ನೀವು ಮಾಡಿರುವುದು ಉತ್ತಮ ಕೆಲಸ. ಆದರೆ, ಸಣ್ಣ  ಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ ಎಂದು ಪ್ರಶ್ನಿಸಿದಾರೆ.

ಕೊರೊನಾ ಪ್ರಾರಂಭದ ದಿನಗಳಲ್ಲಿಯೇ ನಾನು ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಹಿರಂಗಗೊಳಿಸಿದ್ದೆ. ಅದರ ಜತೆಗೆ ನೀವು ಹೇಳುತ್ತಿರುವುದು ಸೇರಿಸಿ ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ತೇಜಸ್ವಿ ಸೂರ್ಯ ಅವರೇ ಎಂದು ಆಗ್ರಹಿಸಿದ್ದಾರೆ.

ಬೆಡ್‌ ಬ್ಲಾಕಿಂಗ್‌ ನಿಮ್ಮ ಗಮನಕ್ಕೆ ಬಂದು ಹತ್ತು ಆಯ್ತು ಅಂತೀತಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ? ಬೇರೇನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ? ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು ಎಂದು ಪ್ರಶ್ನಿಸಿದ್ದಾರೆ.

ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮ ಎಳೆದು ತರುವ ನಿಮ್ಮ ಕೊಳಕು ಬುದ್ದಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರುತ್ತೀರಿ ತೇಜಸ್ವಿ ಸೂರ್ಯ. ಕೊರೊನಾ ವೈರಸ್‌ಗಿಂಗಲೂ ಅಪಾಯಕಾರಿ ನಿಮ್ಮ ಮೆದುಳಿನಲ್ಲಿರುವ ಕೋಮು ವೈರಸ್‌. ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಖಾರವಾಗಿ ಹೇಳಿದ್ದಾರೆ.

Advertisement

ಬೆಡ್‌ ಬ್ಲಾಕಿಂಗ್‌ ದಂಧೆಯಲ್ಲಿ ಶಾಮೀಲಾಗಿರುವವರು ಒಂದೇ ಕೋಮಿನವರು ಎನ್ನುವ ರೀತಿಯಲ್ಲಿ ಆರೋಪಿಗಳ ಪಟ್ಟಿ ಓದಿದ ತೇಜಸ್ವಿ ಸೂರ್ಯ ಅವರೇ ಮುಖ್ಯ ಆರೋಪಿಗಳಾದ ಮುಖ್ಯಮಂತ್ರಿ ಅವರಿಂದ ಹಿಡಿದು ಸಚಿವರು, ಶಾಸಕರು, ಸಂಸದರು  ಯಾವ ಧರ್ಮದವರು ಅದನ್ನೂ ಓದಿ ಹೇಳಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಥಾ ರಾಜ, ತಥಾ ಮಂತ್ರಿ. ಮೈ ಬೀ ಕಾವೂಂಗಾ, ತುಮ್‌ ಬಿ ಕಾವೋ ಎನ್ನುವುದೇ ನಿಮ್ಮ ನರೇಂದ್ರ ಮೋದಿಯವರ ನಿಜವಾದ ಘೋಷಣೆ. ಅದನ್ನೇ ನೀವೆಲ್ಲಾ ಮಾಡುತ್ತಿದ್ದೀರಿ.ಪಾಲು ಹಂಚಿಕೆಯಲ್ಲಿ ಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಅಷ್ಟೇ ಅಲ್ಲವೇ ಎಂದು ಕೇಳಿದ್ದಾರೆ.

ಮುಖ್ಯಮಂತ್ರಿಗಳಿಂದ ಕರ್ತವ್ಯ ಲೋಪ-ಭ್ರಷ್ಟತೆ ನಡೆದಿದ್ದರೆ ಅವರ ವಿರುದ್ಧ ನೇರ ಆರೋಪಪಟ್ಟಿ ಸಲ್ಲಿಸಿ ಅವರನ್ನು ಕಿತ್ತು ಹಾಕಿ. ಇದಕ್ಕಾಗಿ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳನ್ನು ಯಾಕೆ ಬಳಸಿಕೊಳ್ಳುತ್ತೀರಿ. ನಿಮ್ಮ ಆಂತರಿಕ ಕಿತ್ತಾಟಕ್ಕೆ ಕೊರೊನಾ ಯಾಕೆ ಬಳಸಿಕೊಳ್ಳುತ್ತೀರಿ. ಪಿಎಂ ಕೇರ್ಸ್‌ ನಿದಿಗೆ ರಾಜ್ಯದಿಂದ  ಎಷ್ಟು ಹಣ ಸಂದಾಯವಾಗಿದೆ. ಅದರಿಂದ ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ. ರಾಜ್ಯಕ್ಕೆ ವೆಂಟಿಲೇಟರ್‌, ಐಸಿಯು, ಆಕ್ಸಿಜನ್‌ ಎಷ್ಟು ಸಿಕ್ಕಿದೆ. ಮಾಹಿತಿ ಹಕ್ಕಿಗೆ ನಿಷೇಧ ಹೇರಿ ನರೇಂದ್ರಮೋದಿ ರಕ್ಷಿಸುತ್ತಿರುವುದು ಯಾರನ್ನು ಎಂದು ಪ್ರಶ್ನಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಮತ್ತಿತರ ಬಿಜೆಪಿ ಶಾಸಕರು ಬೆಡ್‌ ಬ್ಲಾಕ್‌ ಮಾಡುವ ದಂಧೆ ಬಯಲಿಗೆ ಎಳೆದಿದ್ದಾರೆ. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಇಷ್ಟಕ್ಕೆ ಸೀಮಿತ ಆಗಬಾರದು. ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಇರುವುದು ಇಡೀ ದೇಶಕ್ಕೆ ಗೊತ್ತಿದೆ. ತೇಜಸ್ವಿ ಸೂರ್ಯ ಎಲ್ಲ ಸಂಸದರನ್ನು ಪ್ರಧಾನಿಯವರ ಬಳಿಗೆ ಕರೆದುಕೊಂಡು ಹೋಗಿ ಆಕ್ಸಿಜನ್‌ ಪೂರೈಕೆಗೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next