Advertisement

ಟೊಯೋಟಾ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು: ಸಿದ್ದರಾಮಯ್ಯ

03:08 PM Jan 31, 2021 | keerthan |

ಬೆಂಗಳೂರು: ಟೊಯೋಟಾ ಕಾರ್ಖಾನೆಯ ಬಿಡದಿ ಘಟಕದ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಸಿಎಂ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

Advertisement

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 80 ದಿನಗಳಿಂದ ಮುಷ್ಕರ ನಡೆಸುತ್ತಿರುವ ಟೊಯೋಟಾ ಕಾರ್ಖಾನೆಯ ಬಿಡದಿ ಘಟಕದ ಕಾರ್ಮಿಕರು ಮತ್ತವರ ಕುಟುಂಬದವರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.

ಇದೇ ವೇಳೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ, ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ:“ಕಮಲ-ದಳ ಸಖ್ಯ ಒದ್ದು ಬಂದವರ ಜತೆ ಮದುವೆಯಾದಂತಿದೆ”

ಜಪಾನಿನ ಟೊಯೋಟಾ ಕಂಪನಿಗೆ ರಾಜ್ಯದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಭೂಮಿ, ನೀರು, ವಿದ್ಯುತ್ ನೀಡಿರುವುದು ಇಲ್ಲಿನ ಸರ್ಕಾರ. ನಮ್ಮ ರಾಜ್ಯದ ಸೌಲಭ್ಯಗಳನ್ನು ಬಳಸಿಕೊಂಡು ತನ್ನ ಕಾರ್ಮಿಕರ ಮೇಲೆ ಜಪಾನಿನ ಕಾನೂನುಗಳನ್ನು ಅನ್ವಯಿಸೋಕೆ ಹೊರಟರೆ ಅದು ತಪ್ಪಾಗುತ್ತದೆ. ವಿದೇಶದ ಯಾವುದೇ ಕಂಪನಿಗಳು ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು, ಉತ್ಪಾದನಾ ಘಟಕಗಳನ್ನು ಆರಂಭಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಅವುಗಳು ಈ ನೆಲ ಕಾನೂನಿಗೆ ಅನ್ವಯವಾಗಿ ತನ್ನ ಕಾರ್ಮಿಕರನ್ನು ನಡೆಸಿಕೊಳ್ಳಬೇಕು ಎಂದರು.

Advertisement

ಕಾರ್ಮಿಕರು ಪ್ರತಿಭಟನೆ ನಡೆಸುತ್ತಾ ಸುಮಾರು 3 ತಿಂಗಳಾಗುತ್ತಾ ಬಂತು, ಇಷ್ಟರೊಳಗೆ ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಕಾರ್ಮಿಕ ಸಚಿವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಅಂದರೆ ಮುಖ್ಯಮಂತ್ರಿಗಳೇ ಸಭೆ ಕರೆದು ಇತ್ಯರ್ಥಪಡಿಸಬೇಕಿತ್ತು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರು ಟೊಯೊಟಾ ಕಂಪನಿಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಗಳ ನಡುವೆ ಸಂಧಾನ ಸಭೆ ನಡೆಸಿದ್ದರು. ಕೇವಲ 20 ನಿಮಿಷ ಸಭೆ ನಡೆಸಿ ಸಮಸ್ಯೆ ಬಗೆಹರಿದಿದೆ ಅಂತ ಹೇಳಿದರು. ಸಮಸ್ಯೆ ಬಗೆಹರಿದಿದ್ದರೆ ಕಾರ್ಮಿಕರೇಕೆ ಇನ್ನೂ ಮುಷ್ಕರ ನಿರತರಾಗಿದ್ದಾರೆ? ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು, ಕಾರ್ಮಿಕರ ಸಚಿವರ ಮೇಲೆ ಒತ್ತಡ ಹೇರುತ್ತೇನೆ ಎಂದರು.

ಇದನ್ನೂ ಓದಿ: ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಧ್ರುವನಾರಾಯಣ್ ವಾಗ್ದಾಳಿ

ಆಡಳಿತ ಮಂಡಳಿಯವರು ಇತ್ತೀಚೆಗೆ ನನ್ನನ್ನು ಭೇಟಿಯಾದಾಗ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೆ. ಕಾರ್ಖಾನೆಗೆ ನಮ್ಮವರು ನೀರು, ನೆಲ ಕೊಟ್ಟಿದ್ದಾರೆ. ಹೀಗಾಗಿ ನಮ್ಮ ಕಾರ್ಮಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು. ಸಂಸದ ಡಿ.ಕೆ. ಸುರೇಶ್ ಅವರೂ ಸಭೆ ನಡೆಸಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣ ಕಾರ್ಮಿಕರ ಜೊತೆಗೂಡಿ ಪಾದಯಾತ್ರೆ ಮಾಡಿದ್ದಾರೆ. ಆಡಳಿತ ಮಂಡಳಿ ಕಾರ್ಮಿಕ ಇಲಾಖೆಯ ಕಾಯ್ದೆ, ಕಾನೂನು ಗೌರವಿಸಬೇಕು. ಕಳೆದ ಮೂರು ತಿಂಗಳಿನಿಂದ ವೇತನ ಇಲ್ಲದೆ ಕಾರ್ಮಿಕರು, ಅವರ ಕುಟುಂಬದವರು ಪರದಾಡುತ್ತಿದ್ದಾರೆ. ಸರ್ಕಾರ ಕೈ ಕಟ್ಟಿ ಕೂರದೆ ಬಿಕ್ಕಟ್ಟು ನಿವಾರಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಶಾಸಕರಾದ ರವಿ, ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರಾದ ಮಾಗಡಿಯ ಬಾಲಕೃಷ್ಣ ಮತ್ತಿರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next