ವಿಜಯಪುರ: ಕೃಷಿ ಆದಾಯ ಹೆಚ್ಚಿಸಲು ಭಾಷಣದ ಮಾತಿನಿಂದ ಸಾಧ್ಯವಿಲ್ಲ. ಬದಲಾಗಿ ನಾವು ಮಾಡಿದ ನೀರಾವರಿ ಸೌಲಭ್ಯದಿಂದ ಸಂಗಾಪುರದಂಥ ಕೇವಲ ಎರಡು ಸಾವಿರ ಜನಸಂಖ್ಯೆ ಇರುವ ಸಣ್ಣ ಗ್ರಾಮ 150 ಕೋಟಿ ರೂ. ವಾರ್ಷಿಕ ಆದಾಯ ಪಡೆಯಲು ಸಾಧ್ಯವಾಗಿದೆ. ಇದು ನಾವು ಜನತೆಗೆ ಹಾಗೂ ರೈತರಿಗೆ ಕೊಟ್ಟ ಮಾತಿನಂತೆ ಕೃಷಿ ಆದಾಯ ದ್ವಿಗುಣ ಮಾಡಿ ಬದ್ಧತೆ ತೋರಿದ್ದೇವೆ. ಆದರೆ ಕೃಷಿ ಆದಾಯ ದ್ವಿಗುಣ ಮಾಡುತ್ತೇವೆಂದು ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಮಾಡಿದ್ದೇನು ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಬಬಲೇಶ್ವರ ತಾಲೂಕಿನ ಎಸ್.ಎಚ್. ಸಂಗಾಪುರ ಗ್ರಾಮದ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಿ ನಿವಾಸ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ನೀರಾವರಿ ಮಂತ್ರಿಯಾಗಿ ಬರಡು ನೆಲಕ್ಕೆ ನೀರು ಹರಿಸಿದೆವು. ಎಂ.ಬಿ.ಪಾಟೀಲ ಅವರಂಥ ಒಳ್ಳೆ ಮಂತ್ರಿ ಜಲಸಂಪನ್ಮೂಲ ಸಚಿವರಾಗಿ ಸಿಕ್ಕ ಕಾರಣ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕ್ಷೇತ್ರದ ಶಾಸಕರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರನ್ನು ಶ್ಲಾಘಿಸಿದರು.
ನಿಮ್ಮ ಭಾಗಕ್ಕೆ ನೀರು ಕೊಡುವುದಕ್ಕಾಗಿ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನವನ್ನು ನೀರಾವರಿ ಸೌಲಭ್ಯ ಸಿಕ್ಕಿದೆ. ಕಾರಣ ಟ್ಯಾಂಕರ್ ಮೂಲಕ ಬೆಳೆ ಉಳಿಸಿಕೊಳ್ಳಲು ಹೆಣಗುತ್ತಿದ್ದ ನಿಮ್ಮ ಸಂಕಷ್ಟ ನಿವಾರಣೆಯಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದರು.
ನಂತರ 2018 ರಲ್ಲಿ ನಡೆದ ಒಂದೂವರೆ ಲಕ್ಷ ಕೋಟಿ ರೂ. ಖರ್ಚು ಮಾಡುವ ಚುನಾವಣಾ ಪ್ರಣಾಳಿಕೆಯಲ್ಲಿ ಲಿಖಿತ ಭರವಸೆ ನೀಡಿದ್ದ ಬಿಜೆಪಿ, ಸರ್ಕಾರ ರಚಿಸಿ ಅಧಿಕಾರಕ್ಕೆ ಬರುತ್ತಲೇ ಕೊಟ್ಟ ಮಾತು ಮರೆತಿದೆ. ಮಹದಾಯಿ, ಕೃಷ್ಣಾ ಕೊಳ್ಳದ ಯೋಜನೆಗಳನ್ನು ಮರೆತಿದೆ ಎಂದು ದೂರಿದರು.
ರಾಜ್ಯದಲ್ಲಿ ಹಿಂದೆ ಕೂಡ ವಚನ ಭ್ರಷ್ಟರಾಗದೇ ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ. ಜನಾಶೀರ್ವಾದದಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಾಕಿ ಇರುವ ಎಲ್ಲ ನೀರಾವರಿ ಯೋಜನೆ ಮುಗಿಸುತ್ತೇವೆ. ಇದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಅನುಷ್ಠಾನ ಮಾಡಲು ಬದ್ಧ ಎಂದು ಭರವಸೆ ನೀಡಿದರು.
2014 ರ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ 165 ಪ್ರಣಾಳಿಕೆ ಭರವಸೆಗಳಲ್ಲಿ ನಾನು ಮುಖ್ಯಮಂತ್ರಿಯಾಗಿ 160 ಭರವಸೆ ಈಡೇರಿಸಿದ್ದೇನೆ. ಜನರಿಗೆ ಉತ್ತರದಾಯಿ ಆಗಿದ್ದೇನೆ ಎಂದು ವಿವರಿಸಿದರು.
ಹೊಟ್ಟೆ ಪಾಡಿಗೆ ರಾಜಕೀಯ ಮಾಡದೇ, ಜನಸೇವೆ ಮಾಡಬೇಕು. ವಕೀಲ ವೃತ್ತಿಯಲ್ಲಿದ್ದ ನಾನು ಹೊಟ್ಟೆ ಪಾಡಿಗೆ ರಾಜಕೀಯ ಮಾಡಲು ಅವಕಾಶ ಇತ್ತು. ಆದರೆ ಜನ ಸೇವೆಗಾಗಿ ರಾಜಕೀಯಕ್ಕೆ ಬಂದ ನಾನು ಜನ ಮೆಚ್ಚುವ ಸೇವೆ ನೀಡಿದ ಸಂತೃಪ್ತಿ ಇದೆ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಆನಂದ ನ್ಯಾಮಗೌಡ, ಸುನಿಲಗೌಡ ಪಾಟೀಲ, ಮಾಜಿ ಸಚಿವ ಸಿ.ಎಸ್.ನಾಡಗೌಡ, ಸಂಗಾಪುರದ ಸಿದ್ಧಲಿಂಗೇಶ್ವರ ಕಮರಿಮಠದ ಶ್ರೀಗಳು ಉಪಸ್ಥಿತರಿದ್ದರು.