ಮೈಸೂರು: ಬೆಂಗಳೂರಿನ ಕೆಫೆಯಲ್ಲಿ ನಡೆದ ಸ್ಪೋಟವು ವ್ಯಕ್ತಿಯ ಕೃತ್ಯವೋ ಅಥವಾ ಸಂಘಟನೆಯ ಕೃತ್ಯವೋ ಎಂಬುದು ಗೊತ್ತಾಗಿಲ್ಲ. ಇದು ಭಯೋತ್ಪಾದಕ ಕೃತ್ಯವೇ ಎನ್ನುವುದೂ ಸ್ಪಷ್ಟವಾಗಿಲ್ಲ. ಎಲ್ಲವೂ ಇನ್ನೂ ತನಿಖೆಯ ಹಂತದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಬಂದ ಒಬ್ಬ ವ್ಯಕ್ತಿ ಈ ಸ್ಪೋಟ ನಡೆಸಿದ್ದಾನೆ. ಹೋಟೆಲ್ ನಲ್ಲಿ ತಿಂಡಿಯ ಟೋಕನ್ ತೆಗೆದುಕೊಂಡು, ಹೋಟೆಲ್ ನಲ್ಲಿ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ. ಅವನು ಬಸ್ಸಿನಿಂದ ಇಳಿಯುವುದು ಹೋಟೆಲ್ ಗೆ ಬರುವುದು ಎಲ್ಲಾ ದೃಶ್ಯಾವಳಿಗಳು ಸಿಕ್ಕಿವೆ. ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.
ನಾನು ಕೂಡ ಇಂದು ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋಗುತ್ತೇನೆ. ಒಟ್ಟು 9 ಜನರು ಗಾಯಾಳುಗಳಾಗಿದ್ದಾರೆ. 9ಕ್ಕೆ 9 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಗೂ ನಿನ್ನೆಯ ಸ್ಪೋಟಕ್ಕೂ ಸಾಮ್ಯತೆ ಇಲ್ಲ. ಅದು ಕುಕ್ಕರನಲ್ಲಿ ಆದ ಬ್ಲಾಸ್ಟ್. ಇಲ್ಲಿ ಯಾವ ಕುಕ್ಕರ್ ನಲ್ಲೂ ಬ್ಲಾಸ್ಟ್ ಆಗಿಲ್ಲ ಎಂದು ಸಿಎಂ ಹೇಳಿದರು.
ರಾಜಕಾರಣ ಮಾಡಬಾರದು: ಅಲ್ಪ ಸಂಖ್ಯಾತರ ಓಲೈಕೆಗಾಗಿ ಈ ಥರ ನಡೆದಿದೆ ಎಂದ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರ ಅವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತಲ್ಲ ಅದೂ ಅಲ್ಪ ಸಂಖ್ಯಾತರ ಓಲೈಕೆ ಕಾರಣಕ್ಕೆ ಆಗಿತ್ತೆ? ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡಬಾರದು. ಮಂಗಳೂರು ಬಾಂಬ್ ಬ್ಲಾಸ್ಟ್ ಹಾಗು ಬೆಂಗಳೂರು ಬ್ಲಾಸ್ಟ್ ಸಂಬಂಧವಿಲ್ಲ. ಬ್ಲಾಸ್ಟ್ ಮಾಡಿದ್ದನ್ನು ಖಂಡಿಸುತ್ತೇನೆ. ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ವರದಿ ಬಳಿಕ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಫ್ಎಸ್ಎಲ್ ವರದಿ ಬಂದಿಲ್ಲ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಇನ್ನೂ ಎಫ್ಎಸ್ಎಲ್ ರಿಪೋರ್ಟ್ ಬಂದಿಲ್ಲ. ವರದಿ ಬಂದ ಮೇಲೆ ತಪ್ಪು ನಡೆದಿದ್ದು ಸಾಬೀತಾದರೆ ನಾವು ಯಾರನ್ನು ರಕ್ಷಣೆ ಮಾಡುವುದಿಲ್ಲ. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ವರದಿಯೇ ಬಂದಿಲ್ಲ ಎಂದ ಮೇಲೆ ಬಿಜೆಪಿಯ ಆರೋಪಗಳಿಗೆ ಏನು ಉತ್ತರ ಕೊಡಲಿ ಎಂದರು.