ಬೆಂಗಳೂರು: ಕೆ. ಸುಧಾಕರ್ ಅವರು ಮಂತ್ರಿಯಾಗಿ ಎಷ್ಟು ವರ್ಷ ಆಯಿತು. ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಯಾವಾಗ. ಅವರಿಗೆ ಸ್ವಲ್ಪ ಉಪಕಾರ ಸ್ಮರಣೆ ಇರಬೇಕು. ನಾನು ರಾಜ್ಯ ಮಂತ್ರಿ, ಸಂಪುಟ ದರ್ಜೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಹೀಗಿರುವಾಗ ಸುಧಾಕರ್ ನನಗೇ ಪಾಠ ಹೇಳಿಕೊಟ್ಟರೆ ಹೇಗೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ತಮ್ಮ ನಿವಾಸದಲ್ಲಿಂದು ಭೇಟಿಯಾಗಿದ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಸಿದ್ದರಾಮಯ್ಯ ಮಾತನಾಡಿದರು.
ಅಧಿಕಾರದ ಅಹಂನಿಂದ ಅವರು ಈ ರೀತಿ ಮಾತನಾಡುತ್ತಾರೆ. ಉಪಕಾರ ಸ್ಮರಣೆ ಮರೆತು ಬಾಯಿಗೆ ಬಂದಂತೆ ಮಾತನಾಡಬಾರದು. ಅಧಿಕಾರ ಬಂದ ಬಳಿಕ ಎಲ್ಲವನ್ನೂ ಮರೆಯಬಾರದು ಎಂದು ಸಚಿವ ಸುಧಾಕರ್ ಅವರನ್ನು ಟೀಕಿಸಿದರು.
ನಿನ್ನೆ ದಾಖಲೆಗಳ ಮೂಲಕ ನಾನು ಮಾತನಾಡಿದ್ದೇನೆ. ಅವರು ಏನಾದರೂ ದಾಖಲೆಗಳನ್ನು ಕೊಟ್ಟಿದ್ದಾರೆಯೇ? ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಗಳ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಆಗ ಅಧಿಕಾರದಲ್ಲಿ ಇರಲಿಲ್ಲ. ಮುಖ್ಯಮಂತ್ರಿಯೂ ಆಗಿರಲಿಲ್ಲ. ದಾಖಲೆಗಳು ಅವರ ಬಳಿಯೇ ಇದೆ ಅಲ್ಲವೇ? ಆ ಬಗ್ಗೆಯೂ ತನಿಖೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿ. ಯಾರು ತಪ್ಪು ಮಾಡಿದರೂ, ಯಾವಾಗ ತಪ್ಪು ಮಾಡಿದರೂ ತಪ್ಪೇ. ಎಂದರು.
ಸಚಿವರು ಪಾಂಡವರು, ಕೌರವರ ಬಗ್ಗೆ ಮಾತನಾಡಿದ್ದಾರೆ. ಅವರು ಕೌರವರು ಆಗಲಿಕ್ಕೂ ಲಾಯಕ್ಕಿಲ್ಲ. ಮಹಾಭಾರತದ ಪಾಂಡವರು, ಕೌರವರ ವಿಚಾರ ಈಗ ಏಕೆ. ದ್ವಾಪರ ಯುಗದಲ್ಲಿ ನಡೆದಿದ್ದನ್ನು ಈಗ ಈ ವಿಚಾರದಲ್ಲಿ ಎಳೆದು ತರುವುದೇಕೆ ಎಂದರು.
ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ ಓನ್ಲಿ ಎಂದು ಹೇಳಿದರು